ಈಜಲು ತೆರಳಿದ್ದ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು
ಬಾಗೇಪಲ್ಲಿ, ನ.5: ಈಜಲು ತೆರಳಿದ್ದ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಊದವಾರಪಲ್ಲಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಾಲಮಾಕಲಪಲ್ಲಿ ಗ್ರಾಮದ ಸಂತೋಷ್(13), ವರುಣ್ (12), ಬಾಗೇಪಲ್ಲಿ ತಾಲೂಕಿನ ಊದವಾರಪಲ್ಲಿ ಗ್ರಾಮದ ಮಲ್ಲಿಕಾರ್ಜುನ (12), ಆಂಧ್ರಪ್ರದೇಶ ಮೂಲದ ಚಿತ್ತೂರು ಜಿಲ್ಲೆಯ ವಡ್ಡಿವಾಂಡ್ಲಪಲ್ಲಿ ಗ್ರಾಮದ ಬದ್ರೀನಾಥ್ ಮೃತಪಟ್ಟ ಬಾಲಕರು.
ಇವರು ಬಾಗೇಪಲ್ಲಿ ತಾಲೂಕಿನ ಪುಲಗಲ್ ಗ್ರಾಮ ಪಂಚಾಯತಿಯ ಊದವಾರಪಲ್ಲಿಯ ಹೊರವಲಯದಲ್ಲಿರುವ ಕೊತ್ತಕುಂಟೆಯಲ್ಲಿ ಈಜಲು ಹೋಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಈ ನಾಲ್ವರು ಬಾಲಕರು ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ವೇಳೆ ಅಲ್ಲೇ ಇದ್ದ ಕೊಳದಲ್ಲಿ ಈಜಾಡಲು ನೀರಿಗೆ ಇಳಿದಿದ್ದರು. ಮಧ್ಯಾಹ್ನ ಜಾನುವಾರುಗಳಿಗೆ ನೀರು ಕುಡಿಸಲು ಕುಂಟೆಗೆ ಬಂದ ಗ್ರಾಮಸ್ಥರಿಗೆ ನೀರಿನಲ್ಲಿ ತೇಲುತ್ತಿದ್ದ ಬಾಲಕನ ಶವ ಕಂಡಿದೆ. ಈ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆಯ ವೇಳೆಗೆ ಉಳಿದ ಮೂವರು ಬಾಲಕರ ಶವಗಳನ್ನು ಹೊರ ತೆಗೆದಿದ್ದಾರೆ.
ಜಂಟಿ ಕಾರ್ಯಚರಣೆ: ಬಾಗೇಪಲ್ಲಿ ಆಗ್ನಿಶಾಮಕ ದಳ ಹಾಗೂ ಚೇಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಮೃತ ದೇಹಗಳ ಪತ್ತೆಗಾಗಿ ಜಂಟಿ ಕಾರ್ಯಚರಣೆ ನಡೆಸಿದ್ದು, ಎಲ್ಲಾ ಮೃತದೇಹಗಳು ಪತ್ತೆಯಾಗಿದೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.