ಯೋಗೀಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನ.6ರವರೆಗೆ ನ್ಯಾಯಾಂಗ ಬಂಧನ

Update: 2020-11-05 14:05 GMT

ಧಾರವಾಡ, ನ.5: ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ.6ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಧಾರವಾಡ 3ನೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. 

ಗುರುವಾರ ಬೆಳಗ್ಗೆ 7ಗಂಟೆಗೆ ಧಾರವಾಡದ ಉಪನಗರ ಠಾಣೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಕರೆಯಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು, ನಂತರ ಸುದೀರ್ಘ 9 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದರು.

ಧಾರವಾಡದ ನ್ಯಾಯಾಧೀಶೆ ಎಚ್.ಪಂಚಾಕ್ಷರಿ ಅವರ ಮುಂದೆ ವಿನಯ್ ಕುಲಕರ್ಣಿ ಅವರನ್ನು ಸಂಜೆ ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. 

ನ್ಯಾಯಪೀಠವು ಒಂದು ದಿನದ ಮಟ್ಟಿಗೆ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತು. ಬಳಿಕ  ಅವರನ್ನು ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಕರೆದ್ಯೊಯಲಾಯಿತು. ನ.6ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.  

ವಿನಯ್ ಕುಲಕರ್ಣಿ ಬಂಧನ ಸುದ್ದಿ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News