ಕೊರೋನ ನಿಯಯ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಏಕೆ ಎಫ್‍ಐಆರ್ ದಾಖಲಿಸಿಲ್ಲ ?

Update: 2020-11-05 13:52 GMT

ಬೆಂಗಳೂರು, ನ.5: ರಾಜಕಾರಣಿಗಳು, ಸಿನಿ ತಾರೆಯರು ಕೊರೋನ ನಿಯಮಾವಳಿ ಉಲ್ಲಂಘಿಸಿದರೂ ಅವರ ವಿರುದ್ಧ ಏಕೆ ಎಫ್‍ಐಆರ್ ದಾಖಲಿಸಿಲ್ಲ. ಗಂಭೀರ ಸೆಕ್ಷನ್‍ಗಳಡಿ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿರುವ ಹೈಕೋರ್ಟ್ ಈ ಕುರಿತು ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಸರಕಾರಕ್ಕೆ ಸೂಚನೆ ನೀಡಿದೆ.           

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜನಸಾಮಾನ್ಯರಿಗೆ 250 ರೂಪಾಯಿ ದಂಡ ವಿಧಿಸುತ್ತೀರಿ. ಆದರೆ, ರಾಜಕಾರಣಿಗಳ, ಸಿನಿ ತಾರೆಯರ ವಿರುದ್ಧ ಎಫ್‍ಐಆರ್ ಏಕೆ ದಾಖಲಿಸಲ್ಲ. ಯಾವುದೇ ಕ್ರಮವಿಲ್ಲ ಏಕೆ ಎಂದು ಪ್ರಶ್ನಿಸಿತು.

ಸರಕಾರಿ ಪರ ವಕೀಲ ವಿಕ್ರಮ ಹುಯಿಲ್ಗೋಳ್ ವಾದಿಸಿ, ಕೊರೋನ ನಿಯಮ ಉಲ್ಲಂಘಿಸುವವರ ವಿರುದ್ಧ ಈಗಾಗಲೇ ಕೇಸ್ ದಾಖಲಿಸಲಾಗಿದೆ. 4.33 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ನಗರದ ಬಿಜೆಪಿ ಯುವ ಮೋರ್ಚಾ ಚುನಾವಣಾ ರ‍್ಯಾಲಿ ಸಂಬಂಧ ಕೇಸ್ ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದಾರೆ. ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೋನ ನಿಯಮ ಉಲ್ಲಂಘಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೊರೋನ ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News