ಬಿಜೆಪಿ ಕುರಿತು ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ: ರೇಣುಕಾಚಾರ್ಯ

Update: 2020-11-05 14:12 GMT

ಬೆಂಗಳೂರು, ನ. 5: `ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಗ್ರಾ.ಪಂ.ಸದಸ್ಯನಾಗಿ ಆಯ್ಕೆಯಾದವನು ಅಧ್ಯಕ್ಷನಾಗಬಾರದು ಅಂತ ಏನಾದರೂ ಇದ್ಯಾ? ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನಾನು ಹಾದಿ ಬೀದಿಯಲ್ಲಿ ಮಂತ್ರಿ ಸ್ಥಾನ ಕೇಳುವುದಿಲ್ಲ. ಪಕ್ಷದ ಅಧ್ಯಕ್ಷರಿಗೆ ಹಾಗೂ ಸಿಎಂಗೆ ನನಗೆ ಅವಕಾಶ ನೀಡಬೇಕೆಂದು ಕೇಳಿದ್ದೇನೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರ ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು, ಬಿಜೆಪಿ ಕುರಿತು ಮಾತನಾಡುವ ನೈತಿಕತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಇಲ್ಲ. ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯನವರ ಸ್ಥಾನ ಬದಲಾಗುವ ಸಾಧ್ಯತೆಗಳಿವೆ ಎಂದು ಟೀಕಿಸಿದರು.

ಯಡಿಯೂರಪ್ಪ ನಮ್ಮ ಪ್ರಶ್ನಾತೀತ ಮತ್ತು ಜಾತ್ಯತೀತ ನಾಯಕರು. ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಬೆರಳೆಣಿಕೆಯಷ್ಟು ವೀರಶೈವ ಮುಖಂಡರು ಗೊಂದಲ ಸೃಷ್ಟಿಸಲು ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಸಂಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಅವಧಿಗೆ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿ, 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ಶಾಶ್ವತವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಟೀಕಿಸಿದರು.

ಯತ್ನಾಳ್ ಅವರಿಗೆ ಪಕ್ಷ ಹಾಗೂ ಅಧ್ಯಕ್ಷರು ಏನು ಸೂಚನೆ ಕೊಡಬೇಕಾಗಿತ್ತೋ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಒಂದು ಸಂಸ್ಕೃತಿಯಿದೆ, ಸಂಸ್ಕಾರವಿದೆ. ಇಲ್ಲಿ ಯಾರೂ ಕಾಲು ಹಿಡಿದು ಮಂತ್ರಿಯಾಗಿಲ್ಲ. ಅರ್ಹತೆ ಹಾಗೂ ಜೇಷ್ಟತೆ ಆಧಾರದ ಮೇಲೆ ಮಂತ್ರಿ ಮಾಡಲಾಗಿದೆ. ಯತ್ನಾಳ್ ಮಂತ್ರಿಯಾಗಿಲ್ಲದ ಕಾರಣ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ವಿಷಯಗಳನ್ನು ಅಧ್ಯಕ್ಷರೊಂದಿಗೆ ನಾಲ್ಕು ಗೋಡೆಗಳ ಮಧ್ಯೆ, ಶಾಸಕಾಂಗ ಪಕ್ಷದ ಸಭೆಗಳಲ್ಲಿ ಚರ್ಚಿಸಬೇಕು. ಹಾದಿ ಬೀದಿಯಲ್ಲಿ ಮಾತನಾಡಬಾರದು. ಇದರಿಂದ ಯಡಿಯೂರಪ್ಪರ ವ್ಯಕ್ತಿತ್ವಕ್ಕೆ ಏನೂ ಧಕ್ಕೆಯಾಗುವುದಿಲ್ಲ. ಈ ರೀತಿ ಟೀಕೆ ಮಾಡುವುದರಿಂದ ನೀವು ಯಾವತ್ತೂ ಸಚಿವರಾಗುವುದಿಲ್ಲ ಎಂದು ತಿರುಗೇಟು ನೀಡಿದರು

ವಿಜಯೇಂದ್ರ ಅವರ ಹೆಸರಿನಲ್ಲಿಯೇ ವಿಜಯ ಇದೆ. ಯಡಿಯೂರಪ್ಪನವರು ಕೊಟ್ಟ ಮಾತು, ಇಟ್ಟ ಗುರಿ ಎಂದೂ ತಪ್ಪಿಲ್ಲ. ಯಾರನ್ನು ಮಂತ್ರಿ ಮಾಡಬೇಕು ಯಾರಿಗೆ ಯಾವ ಖಾತೆ ನೀಡಬೇಕು ಅಂತ ಪಕ್ಷದ ವರಿಷ್ಟರು ಹಾಗೂ ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದ ಅವರು, ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News