ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು ?

Update: 2020-11-05 14:21 GMT

ಬೆಂಗಳೂರು, ನ.5: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವುದು ರಾಜಕೀಯ ದುರುದ್ದೇಶಪೂರಿತ ಕ್ರಮ. ಸೈದ್ಧಾಂತಿಕವಾಗಿ ರಾಜಕೀಯ ವಿರೋಧಿಗಳನ್ನು ಎದುರಿಸಲಾಗದ ಬಿಜೆಪಿ ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ದನಿ ಅಡಗಿಸಲು ಪ್ರಯತ್ನಿಸುತ್ತಿರುವುದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವಿನಯ್ ಕುಲಕರ್ಣಿ ಜೊತೆ ನಾನು ಮಾತಾಡಿದ್ದೆ. ತಾನು ನಿರಪರಾಧಿ, ತನ್ನದೇನೂ ಪಾತ್ರ ಇಲ್ಲ ಎಂದು ತಿಳಿಸಿದ್ದರು. ತನಿಖೆ ಮಾಡಿದ್ದ ರಾಜ್ಯದ ಪೊಲೀಸರು ಕೂಡಾ ಯಾವುದೇ ಆರೋಪ ಹೊರಿಸಿಲ್ಲ. ಇದರಿಂದ ನಿರಾಶೆಗೀಡಾದ ಬಿಜೆಪಿ ನಾಯಕರು ಸಿಬಿಐ ಮೂಲಕ ಅವರನ್ನು ಹಣಿಯಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಕಾಂಗ್ರೆಸ್ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿರುವ ಬಿಜೆಪಿ, ಅವರ ಮೇಲೆ ಪೊಲೀಸ್, ಸಿಬಿಐ, ಆದಾಯ ತೆರಿಗೆ ಇಲಾಖೆ, ಈಡಿ ಮೊದಲಾದ ಕೇಂದ್ರದ ಅಧೀನ ಸಂಸ್ಥೆಗಳ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ. ಇಂತಹ ಸವಾಲನ್ನು ಎದುರಿಸಿ ಗೆಲ್ಲುವ ಶಕ್ತಿಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News