ಬಿಎಸ್‌ವೈ ಮಧ್ಯಪ್ರವೇಶಿಸಿ ವಿನಯ್ ಕುಲಕರ್ಣಿಗೆ ನ್ಯಾಯ ಒದಗಿಸಬೇಕು: ಜಯ ಮೃತ್ಯುಂಜಯ ಸ್ವಾಮೀಜಿ

Update: 2020-11-05 15:18 GMT

ಬೆಂಗಳೂರು, ನ.5: ಲಿಂಗಾಯತ ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸ್ಥಳೀಯ ರಾಜಕೀಯ ದ್ವೇಷದ ಒತ್ತಡಕ್ಕೆ ಮಣಿದು ಸಿಬಿಐ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಕ್ರಮವನ್ನು ಲಿಂಗಾಯತ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಪ್ರಕಣವೊಂದರ ತನಿಖೆಯ ವಿಚಾರದ ನೆಪ ಮಾಡಿಕೊಂಡು ಅಧಿಕಾರಿಗಳು ಕುಲಕರ್ಣಿ ಯವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಗಿಸುವ ಉದ್ದೇಶವನ್ನಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಇಂದು ಅವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಬಹು ಸಂಖ್ಯಾತ ಪಂಚಮಸಾಲಿ ಸಮಾಜವನ್ನು ಚುನಾವಣಾ ಸಮಯದಲ್ಲಿ ರಾಜಕೀಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಏರಿದ ನಂತರ ರಾಜಕೀಯವಾಗಿ ಸಮರ್ಥ ಇರುವ ಸಮಾಜದ ಮುಖಂಡರನ್ನು ತುಳಿಯುವ ತಂತ್ರವನ್ನು ನಾವು ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಪಂಚಮಸಾಲಿ ಸಮಾಜ ಬೆಂಬಲಿಸುವ ಪಕ್ಷ ರಾಜ್ಯದಲ್ಲಿ ಎಲ್ಲ ಸಮಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎನ್ನುವುದು ಇಂಥಹ ನಾಯಕರು ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ಸಮಾಜದ ಒಬ್ಬ ನಾಯಕ. ಮುಂಬೈ ಕರ್ನಾಟಕದಲ್ಲಿ ಅವರದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದವರು. ಸರ್ವ ಸಮಾಜದ ಒಳಿತಿಗಾಗಿ ಕೆಲಸ ಮಾಡಿ ಸರ್ವ ಜನಾಂಗದ ನಾಯಕರೆನಿಸಿಕೊಂಡವರು. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಕೆಲವರು ಈ ಹಿಂದಿನಿಂದಲೂ ಧಾರವಾಡದಲ್ಲಿ ಮಾಡುತ್ತಾ ಬರುತ್ತಿದ್ದಾರೆ. ಅದು ನಮ್ಮ ಗಮನಕ್ಕೂ ಬಂದಿದೆ. ಈ ಪ್ರಕರಣದ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡುತ್ತಲಿವೆ ಎನ್ನುವುದು ನಮಗೆ ಗೊತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ. ಇಲ್ಲವಾದರೆ ಮುಂಬರುವ ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲು ಸಿದ್ಧವಾಗಿದೆ ಎನ್ನುವುದು ಈ ಪಕ್ಷಗಳ ನಾಯಕರು ಮರೆಯಬಾರದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಈ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದರ ಮೂಲಕ ಸಮಾಜದ ನಾಯಕನಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ದ್ವೇಷದ ರಾಜಕಾರಣ ನಿಜಕ್ಕೂ ಶೋಭೆಯಲ್ಲ ಎಂದು ಎಂದು ಬಸವ ಜಯ ಮೃತ್ಯುಂಜ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News