×
Ad

ಸಿಗಂದೂರು ದೇಗುಲದ ಪರ ಹೋರಾಟದ ಜೊತೆ ನಾನಿರುತ್ತೇನೆ: ಬಿ.ಕೆ.ಹರಿಪ್ರಸಾದ್

Update: 2020-11-05 21:33 IST

ಶಿವಮೊಗ್ಗ, ನ.5: ಶೂದ್ರ ಧಾರ್ಮಿಕ ಕೇಂದ್ರಗಳನ್ನು ವೈದಿಕೀಕರಣ ಮಾಡುವ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಶೂದ್ರ ಶಕ್ತಿಗಳ ಮೇಲೆ ನಡೆಯುವ ಶೋಷಣೆ ತಪ್ಪಿಸಲು ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಮಾಜಿ ರಾಜ್ಯಸಭೆ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಶಿವಮೊಗ್ಗ ಈಡಿಗರ ಭವನದಲ್ಲಿ  ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ತರವಲ್ಲ. ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಶೂದ್ರ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದೆ. ಇದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ. ನನಗೆ ಯಾವುದೇ ಜಾತಿಯ ಬೇಧಭಾವ ಇಲ್ಲ. ಎಲ್ಲಿ ಶೋಷಣೆ ಆದರೂ ನೊಂದವರ ಪರ ನಿಲ್ಲುತ್ತೇನೆ. ಸಂವಿಧಾನದ ಆಶಯದಂತೆ ರಾಜಕಾರಣ ಮಾಡಿದವನು ನಾನು. ಈ ಕಾರಣದಿಂದಲೇ ಜಾತಿಯ ಬಲವೇ ಇಲ್ಲದ ಬೆಂಗಳೂರಿನಲ್ಲಿ ರಾಜಕೀಯ ಮಾಡಿದ್ದೇನೆ ಎಂದು ಹೇಳಿದರು.

ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯೆಯಿಂದ ಈ ಎಲ್ಲ ಶೋಷಣೆಯಲ್ಲಿ ನಾವು ಗೆಲ್ಲಬಹುದು. ರಾಜ್ಯ ಸಭೆ ಸದಸ್ಯನಾಗಿದ್ದಾಗ ಸರ್ವಜಾತಿಯ ಸಂಘಟನೆಗಳಿಗೆ ನೆರವು ನೀಡಿದ್ದೇನೆ. ಸಮುದಾಯ ಭವನದಿಂದ ಬರುವ ಆದಾಯದಲ್ಲಿ ಆಯಾ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂಬುದು ನನ್ನ ಉದ್ದೇಶವಾಗಿತ್ತು ಎಂದ ಅವರು, ಸಿಗಂದೂರು ಚೌಡಮ್ಮ ದೇವಿ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳಿಗೆ ನನ್ನ ಸ್ಪಷ್ಟ ವಿರೋಧ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಈ ವಿಚಾರದಲ್ಲಿ ಇಲ್ಲಿನ ಜನ ಮಾಡುವ ಯಾವುದೇ ಹೋರಾಟದಲ್ಲಿ ನಾನಿರುತ್ತೇನೆ. ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಕೆ.ವೈ. ರಾಮಚಂದ್ರ, ಪ್ರೊ.ಕಲ್ಲನ, ತೇಕಲೆ ರಾಜಪ್ಪ, ಕಾಗೋಡು ರಾಮಪ್ಪ ಈಡಿಗರ ಮಹಿಳಾ ಸಂಘದ ವೀಣಾವೆಂಕಟೇಶ್,ಲಲಿತಾ ಹೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News