ಜಂಬೂ ಸವಾರಿ ವೇಳೆ ಶಿಷ್ಟಾಚಾರ ಉಲ್ಲಂಘಿಸಿದ ರೋಹಿಣಿ ಸಿಂಧೂರಿ: ಶಾಸಕ ಸಾ.ರಾ.ಮಹೇಶ್ ಆರೋಪ

Update: 2020-11-05 17:07 GMT

ಮೈಸೂರು,ನ.5: ದಸರಾ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.

ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು ಪತ್ರದಲ್ಲಿ ಜಂಬೂ ಸವಾರಿಯ ಪುಷ್ಪಾರ್ಚನೆ ಸಮಯದಲ್ಲಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್ ಮತ್ತು ರಾಜವಂಶಸ್ಥರ ಬಳಿಕ ಜಿಲ್ಲಾಧಿಕಾರಿ ನಿಲ್ಲಬೇಕು. ಆದರೆ ಈ ಬಾರಿ ಜಿಲ್ಲಾಧಿಕಾರಿ ಅವರು ರಾಜವಂಶಸ್ಥರಿಗೆ ಸ್ಥಳಾವಕಾಶ ನೀಡದೆ ಅವರನ್ನು ಕೊನೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಇದು ಶಿಷ್ಟಾಚಾರ ಮತ್ತು ಸಂಪ್ರದಾಯದ ಉಲ್ಲಂಘನೆ ಎಂದು ಉಲ್ಲೇಖಿಸಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಾಲ್ಗೊಂಡಿಲ್ಲ. ಈ ಮೂಲಕ ಮಹಾಪುರುಷರೆಡೆಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ದಿನ ಜಿಲ್ಲಾಧಿಕಾರಿಗಳು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

ಜಿಲ್ಲಾಧಿಕಾರಿಗೆ ಶಿಷ್ಟಾಚಾರ, ನಾಡಿನ ಸಂಪ್ರದಾಯ ಮತ್ತು ಪರಂಪರೆಯ ಕುರಿತು ಸೂಕ್ತ ತಿಳುವಳಿಕೆ ನೀಡುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News