×
Ad

ಮಾಸ್ಕ್ ಧರಿಸದೇ ಇರುವುದಕ್ಕೆ ಸಂಸದ ತೇಜಸ್ವಿ ಸೂರ್ಯ, ಇತರ ರಾಜಕಾರಣಿಗಳಿಂದ ದಂಡ ವಸೂಲಿ ಮಾಡಿದ್ದೀರಾ?

Update: 2020-11-06 11:19 IST

ಬೆಂಗಳೂರು: ರಾಜಕೀಯ ರ್ಯಾಲಿಗಳಲ್ಲಿ ಭಾಗವಹಿಸಿದ್ದಾಗ ಮುಖಗವಚವನ್ನು ಧರಿಸದ ಸಂಸತ್ ಸದಸ್ಯ ಹಾಗೂ ವಕೀಲ ತೇಜಸ್ವಿ ಸೂರ್ಯ ಹಾಗೂ ಇತರ ರಾಜಕೀಯ ನಾಯಕರಿಂದ ದಂಡ ವಸೂಲಿ ಮಾಡಿದ್ದೀರೋ, ಇಲ್ಲವೋ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.

ಮುಖ್ಯ ನ್ಯಾಯಾಧೀಶ ಅಭಯ್ ಓಕಾ ಹಾಗೂ ಜಸ್ಟಿಸ್ ಎಸ್.ವಿಶ್ವನಾಥ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸುರಕ್ಷಿತ ಅಂತರ ಹಾಗೂ ಮುಖಗವಸು ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದುಕೋರಿ ಲೆಟ್ಝ್‌ಕಿಟ್ ಫೌಂಡೇಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿತು.

ಸೆಪ್ಟಂಬರ್ 30 ರಂದು ಸಂಸದ ತೇಜಸ್ವಿ ಸೂರ್ಯ ಅವರನ್ನು ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಗೆ ಸ್ವಾಗತಿಸುವ ವೇಳೆ ನಡೆದ ರ್ಯಾಲಿಯಲ್ಲಿ ಸೂರ್ಯ ಅವರು ಮುಖಗವಸು ಧರಿಸಿದ್ದರು. ಅಲ್ಲಿದ್ದ ಕಾರ್ಯಕರ್ತರು ಮಾಸ್ಕ್ ಧರಿಸದೇ ಇರುವುದು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದಿದೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

ಆದಾಗ್ಯೂ, ಅಡ್ವಕೇಟ್ ಜಿಆರ್ ಮೋಹನ್ ಪೋಟೊಗಳ ಸಹಿತ ಸಲ್ಲಿಸಿರುವ ಮೆಮೊದಲ್ಲಿ ಸಂಸದ ಸೇರಿದಂತೆ ಯಾರೂ ಕೂಡ ಆ ದಿನ ಮಾಸ್ಕ್‌ಗಳನ್ನು ಧರಿಸಿರಲಿಲ್ಲ. ಸುರಕ್ಷಿತ ಅಂತರ ಕಾಯ್ದುಕೊಂಡಿರಲಿಲ್ಲ.ಮೆರವಣಿಗೆ ಅಥವಾ ರ್ಯಾಲಿಯ ಆಯೋಜನೆಯ ವೇಳೆ ಪಾಲಿಸಬೇಕಾದ ಕೇಂದ್ರ ಸರಕಾರದ ಎಸ್‌ಒಪಿ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ.

ಮಾಸ್ಕ್‌ಗಳನ್ನು ಧರಿಸದೇ ಇರುವುದಕ್ಕೆ ಸಂಸತ್ ಸದಸ್ಯ(ತೇಜಸ್ವಿ ಸೂರ್ಯ) ಹಾಗೂ ಇತರ ರಾಜಕೀಯ ಮುಖಂಡರಿಂದ ನೀವು ದಂಡ ಸಂಗ್ರಹಿಸಿದ್ದೀರಾ? ನೀವು ಯಾವ ಸಂದೇಶಗಳನ್ನು ನೀಡಿದ್ದೀರಿ ಎಂದು ಹೈಕೋರ್ಟ್ ನ್ಯಾಯಪೀಠ ಪ್ರಶ್ನಿಸಿದೆ.

ಮೋಹನ್ ಸಲ್ಲಿಸಿರುವ ಫೋಟೊಗಳಲ್ಲಿ ಮಾಸ್ಕ್ ಧರಿಸದೇ ಇರುವುದು ಕಂಡುಬಂದಿದ್ದು, ಪೊಲೀಸರು ತಮ್ಮ ವರದಿಯಲ್ಲಿ ರಾಜಕಾರಣಿಗಳು ಮಾಸ್ಕ್ ಧರಿಸಿದ್ದಾರೆಂದು ವರದಿ ಸಲ್ಲಿಸಿದ್ದು ಹೇಗೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

 ಕೋವಿಡ್ ಸಮಯದಲ್ಲಿ ಎಷ್ಟು ಚುನಾವಣಾ ರ್ಯಾಲಿಗಳಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರಕಾರವನ್ನು ನ್ಯಾಯಾಲಯ ಕೇಳಿದೆ. ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನವೆಂಬರ್ 9ರಂದು ಮುಂದುವರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News