ಶಾರ್ಟ್ ಸರ್ಕ್ಯೂಟ್ ನಿಂದ 3 ಅಂಗಡಿಗಳಿಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು
ಬಾಗಲಕೋಟೆ, ನ.6: ಬೈಕ್ ಗ್ಯಾರೇಜ್‍ನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಮೂರು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ.
ಬಾದಾಮಿ-ಬಾಗಲಕೋಟೆ ರಸ್ತೆಯಲ್ಲಿರುವ ಬೈಕ್ ಗ್ಯಾರೇಜ್, ಫರ್ನಿಚರ್ ಅಂಗಡಿ, ಹೋಟೆಲ್‍ನಲ್ಲಿ ಶುಕ್ರವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ.
ಮೊದಲಿಗೆ ಅಲ್ಲಾಭಕ್ಷ ಹೆಬ್ಬಳ್ಳಿ ಎಂಬುವರ ಬೈಕ್ ಗ್ಯಾರೇಜ್‍ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಗ್ಯಾರೇಜ್ ಪಕ್ಕದ ಹೂವಪ್ಪ ಕಲಾಲ ಅವರಿಗೆ ಸೇರಿದ ಹೋಟೆಲ್, ಭೀಮಸಿ ಬಡಿಗೇರ ಎಂಬುವರಿಗೆ ಸೇರಿದ ಫರ್ನೀಚರ್ ಅಂಗಡಿಗೆ ಬೆಂಕಿ ವ್ಯಾಪಿಸಿರುವ ಪರಿಣಾಮ, ಗ್ಯಾರೇಜ್‍ನಲ್ಲಿದ್ದ ನಾಲ್ಕು ಬೈಕ್‍ಗಳು, ಹೊಟೇಲ್‍ನಲ್ಲಿದ್ದ ಪ್ಲಾಸ್ಟಿಕ್ ಖುರ್ಚಿಗಳು, ಟೇಬಲ್‍ಗಳು ಹಾಗೂ ಫರ್ನಿಚರ್ ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬದಾಮಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.