×
Ad

ಸಿಗಂದೂರು ಮೇಲ್ವಿಚಾರಣ ಸಮಿತಿ ರದ್ದುಗೊಳಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ: ಬಿ.ಕೆ ಹರಿಪ್ರಸಾದ್

Update: 2020-11-06 18:07 IST

ಶಿವಮೊಗ್ಗ, ನ.06: ಸಿಗಂದೂರು ದೇವಾಲಯ ವಿಚಾರವಾಗಿ ಸರ್ಕಾರ ರಚಿಸಿರುವ ಮೇಲ್ವಿಚಾರಣ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಸಿಗಂದೂರಿನಿಂದ ಬೆಂಗಳೂರಿನವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಸಭಾ ಮಾಜಿ ಸದಸ್ಯ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚಿಸಿರುವ ಮೇಲ್ವಿಚಾರಣ ಸಮಿತಿಯಿಂದ ಹಿಂದುಳಿದ ವರ್ಗದವರ ಸ್ವಾಭಿಮಾನಕ್ಕೆ ಹೊಡೆತಕೊಟ್ಟಿದೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಮೇಲ್ವಿಚಾರಣ ಸಮಿತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ನನ್ನ ನೇತೃತ್ವದಲ್ಲೇ ಸಿಗಂದೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತೇನೆ ಎಂದು ಹೇಳಿದರು.

ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಶೂದ್ರ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದೆ. ಸರ್ಕಾರ ಕ್ಷುಲ್ಲಕ ಕಾರಣ ಇಟ್ಟುಕೊಂಡು ಮೇಲ್ವಿಚಾರಣೆ ಸಮಿತಿ ರಚಿಸಿರುವುದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಹಲವಾರು ದೇವಾಲಯ, ಮಂದಿರಗಳಲ್ಲಿ ಗಲಾಟೆಗಳು ಆಗಿವೆ. ಅಲ್ಲಿ ಯಾವುದೇ ಸಮಿತಿ ರಚಿಸಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ಸಿಗಂದೂರು ದೇವಾಲಯದ ಟ್ರಸ್ಟ್ ಮೇಲೆ ಯಾಕೆ ಸಮಿತಿ ರಚನೆ ಮಾಡಿದ್ದಿರಾ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳು ನಾನು ಹಿಂದುಳಿದ ವರ್ಗದ ಪರ ಅಂತ ಘೋಷಣೆ ಮಾಡಿಕೊಳ್ಳುತ್ತಾರೆ. ಈಗ ಸಿಗಂದೂರು ದೇವಾಲಯ ವಿಚಾರವಾಗಿ ಹಿಂದುಳಿದವರ ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದರು.

ಸಮಿತಿ ರಚನೆಯಲ್ಲಿ ಹಿಂದುತ್ವದ ಕೈವಾಡ ಇರುವುದು ಸ್ಪಷ್ಟವಾಗಿದೆ. ಜಿಲ್ಲಾಧಿಕಾರಿಗಳು ಅವರ ಕಛೇರಿಯಲ್ಲಿ ಮೇಲ್ಚಿಚಾರಣೆ ಸಮಿತಿ ರಚಿಸಿಲ್ಲ. ಬದಲಾಗಿ ಒಂದು ಸಂಘಟನೆಯ ಕೊಠಡಿಯಲ್ಲಿ ಕುಳಿತುಕೊಂಡು ಮೇಲ್ವಿಚಾರಣೆ ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದಾರೆ. ಈ ಹಿಂದೆ ಹಿಂದುತ್ವವಾದಿಗಳು ಹಿಂದೂಸ್ಥಾನ್ ಪಾಕಿಸ್ಥಾನ್ ಎಂದು ಹೇಳಿ ಜನರನ್ನ ಒಡೆದು ಆಳಲಾಗುತ್ತಿತ್ತು. ಈಗ ಹಿಂದುಳಿದ ಜನ ಜಾಗೃತಗೊಂಡ ನಂತರ ಹಿಂದುತ್ವವಾದಿಗಳೇ ಹಿಂದುಳಿದವರನ್ನ ದಮನ ಪ್ರಕ್ರಿಯೆಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಆರ್ಯ ಈಡಿಗ ಸಮುದಾಯದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್, ಜೆಡಿಎಸ್ ನ ಜಿ.ಡಿ.ಮಂಜುನಾಥ್, ಪ್ರೊ.ಕಲ್ಲನ್,ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News