ಮಾಜಿ ಸಚಿವ ವಿನಯ್ ಕುಲಕರ್ಣಿ 3 ದಿನ ಸಿಬಿಐ ಕಸ್ಟಡಿಗೆ
ಧಾರವಾಡ, ನ.6: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್್ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಧಾರವಾಡದ 32ನೆ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಕಸ್ಟಡಿಗೆ ನೀಡುವ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಚ್.ಪಂಚಾಕ್ಷರಿ ಅವರಿದ್ದ ನ್ಯಾಯಪೀಠ, ಈ ಆದೇಶ ಹೊರಡಿಸಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಶುಕ್ರವಾರ ಸಿಬಿಐ ಮೂರು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಧಾರವಾಡದ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ವಿನಯ್ ಕುಲಕರ್ಣಿ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ವಕೀಲರ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ್ದರು. ಬಳಿಕ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿರುವ ತೀರ್ಪುನ್ನು ಪ್ರಕಟಿಸಿತು.
ಸಿಬಿಐ ಕಸ್ಟಡಿಗೆ ನೀಡಿದ ಕೋರ್ಟ್ ಪ್ರತಿ ದಿನ 10 ನಿಮಿಷಗಳ ಕಾಲ ಕುಟುಂಬಸ್ಥರಿಗೆ ಭೇಟಿ ಮಾಡುವ ಅವಕಾಶ ನೀಡಿದೆ. ಸಿಬಿಐ ಅಧಿಕಾರಿಗಳ ಸಮ್ಮುಖದಲ್ಲಿ ವಿನಯ್ ಕುಲಕರ್ಣಿಗೆ ಕುಟುಂಬಸ್ಥರನ್ನು ಭೇಟಿ ಮಾಡಿಸಬೇಕು ಎಂದು ಸೂಚಿಸಿದೆ. ನ.9ರಂದು ಕೋರ್ಟ್ ಗೆ ಬೆಳಗ್ಗೆ 11ಗಂಟೆಗೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ನ್ಯಾಯಪೀಠವು ಸೂಚನೆ ನೀಡಿದೆ.
ಐಪಿಸಿ ಸೆಕ್ಷನ್ 302,143, 147, 148, 120ಬಿ ಅಡಿ ಕೇಸ್ ದಾಖಲಾಗಿದೆ. ವಿನಯ್ ಕುಲಕರ್ಣಿ ಪರವಾಗಿ ವಕೀಲರಾದ ಬಾಹುಬಲಿ ಧನವಾಡೆ ವಾದ ಮಂಡನೆ ಮಾಡಿದ್ದು, ಸಿಬಿಐ ಪರವಾಗಿ ವಕೀಲರಾದ ಸುದರ್ಶನ ವಾದ ಮಂಡನೆ ಮಾಡಿದ್ದಾರೆ.