×
Ad

ಪಟಾಕಿ ನಿಷೇಧ ಕ್ರಮದ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-11-06 19:28 IST

ಬೆಂಗಳೂರು, ನ.6: ರಾಜ್ಯದಲ್ಲಿ ಈ ಬಾರಿ ಕೊರೋನ ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪಾವಳಿಗೆ ಪಟಾಕಿ ನಿಷೇಧ ಮಾಡಲು ಮುಂದಾಗಿದ್ದಾರೆ. ಈ ನಿರ್ಧಾರವನ್ನು ವಸತಿ ಸಚಿವ ವಿ.ಸೋಮಣ್ಣ ಸ್ವಾಗತಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಪಟಾಕಿ ನಿಷೇಧ ಮಾಡಿದ ಮುಖ್ಯಮಂತ್ರಿಗಳ ನಿರ್ಧಾರ ಪ್ರತಿಯೊಬ್ಬರೂ ಶ್ಲಾಘಿಸುವ, ಮೆಚ್ಚುವಂತಹದ್ದಾಗಿದೆ. ಇದನ್ನು ಜನತೆಯ ಪರವಾಗಿ ಸ್ವಾಗತ ಮಾಡುತ್ತೇನೆ ಎಂದರು.

ಪಟಾಕಿ ತಯಾರಕರು, ಮಾರಾಟಗಾರರಿಗೆ ಅನಾನುಕೂಲವಾಗಲಿದೆ. ಆದರೆ, ಇಂದಿನ ಪರಿಸ್ಥಿತಿ ಏನಿದೆ ಎನ್ನುವುದು ಮುಖ್ಯ. ದಿಲ್ಲಿಯಲ್ಲಿ, ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆಲ್ಲವನ್ನೂ ಮನಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಕೊರೋನ ನಿಯಂತ್ರಣ ಅಗತ್ಯ, ಸೋಂಕಿನಿಂದ ಜನರ ಶ್ವಾಸಕೋಶಕ್ಕೆ ಆಗುತ್ತಿರುವ ಹಾನಿ ಏನು ಎನ್ನುವ ತಜ್ಞರ ವರದಿ ಕ್ರೋಡೀಕರಿಸಿ ನೋಡಿದಾಗ, ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧದ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ. ಇದನ್ನು ಸಿಎಂ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಪಟಾಕಿ ಉತ್ಪಾದಕರು, ಮಾರಾಟಗಾರರಿಗೆ ನಷ್ಟ ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News