ಸಿದ್ದರಾಮಯ್ಯ ನಾಯಕರಾಗಲು ಅಯೋಗ್ಯ: ಸಚಿವ ಈಶ್ವರಪ್ಪ

Update: 2020-11-06 14:23 GMT
File photo

ಚಿತ್ರದುರ್ಗ, ನ.6: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳಿನ್‍ ಕುಮಾರ್ ಎಲ್ಲರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಅವರು ನಾಯಕರಾಗಲು ಅಯೋಗ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಇನ್ನು ಯಾರ ಬಗ್ಗೆ ಮಾತನಾಡಬೇಕು ಎಂಬುದು ಅರ್ಥವಾಗಿಲ್ಲ. ರಾಜ್ಯದ ಜನರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ ಬಳಿಕವೂ ಅವರಲ್ಲಿ ಬದಲಾವಣೆ ಕಂಡಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡರೂ ಬುದ್ಧಿ ಬಂದಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿದ್ದರೂ ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ನಾಯಕರಾಗಿ ಬಿಂಬಿಸಿಕೊಳ್ಳಲು ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿಯಾಗುವ ಈ ಹಗಲು ಕನಸು ಯಶಸ್ಸು ಕಾಣುವುದಿಲ್ಲ ಎಂದರು.

ಹೆಣ್ಣು ಹಾಗೂ ಗೋವನ್ನು ತಾಯಿ ಅಂಥ ಪೂಜಿಸುವ ದೇಶ ಭಾರತ. ಆದರೆ, ಹೆಣ್ಣಿಗೆ ಭದ್ರತೆ ಇಲ್ಲ, ಗೋವಿಗೆ ರಕ್ಷಣೆ ಇಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಹೆಣ್ಣು ಹಾಗೂ ಗೋವು ರಕ್ಷಣೆಗೆ ಮುಂದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಲವ್ ಜಿಹಾದ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News