108 ಆರೋಗ್ಯ ಸೇವೆಯಲ್ಲಿ ಮೇಜರ್ ಸರ್ಜರಿಗೆ ಸಚಿವ ಡಾ.ಸುಧಾಕರ್ ಸೂಚನೆ

Update: 2020-11-06 14:28 GMT

ಬೆಂಗಳೂರು, ನ.6: ರಾಜ್ಯಾದ್ಯಂತ ಗುಣಮಟ್ಟದ ಆಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ತುರ್ತು ಆರೋಗ್ಯ ಸೇವೆ ನೀಡುವ ಆಂಬ್ಯುಲೆನ್ಸ್‍ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

108 ಆಂಬ್ಯುಲೆನ್ಸ್ ಸೇವೆಗೆ ರಾಜ್ಯ ಸರಕಾರ ದೊಡ್ಡ ಮೊತ್ತದ ಹಣ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ/ ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಮಾಹಿತಿ ತಂತ್ರಜ್ಞಾನ ವಲಯದ ಐಡೆಕ್ ಕಂಪನಿ ಪ್ರತಿನಿಧಿಗಳು, ತಜ್ಞರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗುತ್ತಿಗೆ ಕರಾರು ಕರಡು ಕುರಿತು ಶುಕ್ರವಾರ ಸಭೆ ನಡೆಸಿದ ಅವರು ಈ ಸೂಚನೆಗಳನ್ನು ನೀಡಿದರು.

ಜಾಗತಿಕ ಮಟ್ಟದಲ್ಲೆ ಟೆಂಡರ್ ಕರೆಯಬೇಕು. ಯಾವ ಹಂತದಲ್ಲೂ ಲೋಪಗಳಿಗೆ ಅವಕಾಶ ಇರಲೇಬಾರದು. ಆರ್ಥಿಕವಾಗಿ, ತಾಂತ್ರಿಕವಾಗಿ ಸಶಕ್ತವಾದ ಕಂಪನಿಗಳು ಮಾತ್ರವೇ ಬಿಡ್ ನಲ್ಲಿ ಪಾಲ್ಗೊಳ್ಳಲು ಅವಕಾಶ ಇರುವಂತಹ ಷರತ್ತುಗಳನ್ನು ವಿಧಿಸಬೇಕು. ಒಂದು ಲಕ್ಷ ಜನಸಂಖ್ಯೆ ಅನ್ನು ಮಾನದಂಡವಾಗಿ ಇಟ್ಟುಕೊಳ್ಳುವ ಬದಲಿಗೆ ಭೌಗೋಳಿಕ ಸವಾಲು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕರಾರು ವಿಧಿಸಬೇಕು. ಕರೆ/ ಸಂದೇಶ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ರೋಗಿಯನ್ನು ಕರೆದೊಯ್ಯುವಂತಿರಬೇಕು ಎಂದು ಅವರು ಹೇಳಿದರು.

ಆಂಬ್ಯುಲೆನ್ಸ್ ನಿಗದಿ ಆಗುವ ಮೊದಲು ಕಾಲ್ ಸೆಂಟರ್ ನಲ್ಲಿ ಕರೆ ಸ್ವೀಕರಿಸಿ ಸಮೀಪದಲ್ಲಿ ಇರುವುದನ್ನು ಕಳುಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಾದ ಸಿಬ್ಬಂದಿ ಇರಲೇಬೇಕು. ಉಬರ್ ಮತ್ತು ಓಲಾ ಮಾದರಿಯ ಆ್ಯಪ್ ವ್ಯವಸ್ಥೆ ಇರಬೇಕು. ಹಿಂದೆ ಜಿವಿಕೆ ಸಂಸ್ಥೆಗೆ ಗುತ್ತಿಗೆ ನೀಡಿದಾಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಲಿಲ್ಲ. ಈಗ ಅನೇಕ ಸಂಸ್ಥೆಗಳು ಸೇವೆ ನೀಡಲು ಮುಂದಾಗಿವೆ. ಪ್ರಾಥಮಿಕ ಹಂತದ ಚರ್ಚೆಗೆ 20 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಜಿಪಿಎಸ್, ಬಯೋಮೆಟ್ರಿಕ್, ಕಾಲ್ ಸೆಂಟರ್ ವ್ಯವಸ್ಥೆ ಸದೃಢವಾಗಿರಬೇಕು. ವಾಹನಗಳ ಹೊಣೆ ಮತ್ತು ಐಟಿ ಪ್ರತ್ಯೇಕವಾಗಿ ಗುತ್ತಿಗೆ ನೀಡಬೇಕೆ, ಬೇಡವೇ? ಯಾವುದು ಹೆಚ್ಚು ಉಪಯೋಗ ಎಂಬ ಅಧ್ಯಯನ ಮಾಡಬೇಕು. ಗುತ್ತಿಗೆ ಅವಧಿ ಮೂರು ವರ್ಷ ಇದ್ದರೆ ಅವರಿಗೂ ಹೊಣೆಗಾರಿಕೆ ಇರುತ್ತದೆ. ಈ ಹಿಂದೆ ಅನೇಕ ಸಲ ಕರೆ ಮಾಡಿದರೂ ಆಂಬ್ಯುಲೆನ್ಸ್ ಸಿಗದೆ ಬೇರೆ ವಾಹನಗಳಲ್ಲಿ ಹೋಗಿರುವ, ಅಪಘಾತದಲ್ಲಿ ಸರಿಯಾದ ಸೇವೆ ಸಿಗದ ನಿದರ್ಶನಗಳಿವೆ. ಅವು ಮರುಕಳಿಸಬಾರದು ಎಂದು ಸುಧಾಕರ್ ಹೇಳಿದರು.

ನೋಡಲು ಆಂಬ್ಯುಲೆನ್ಸ್ ರೀತಿ ಇದ್ದರೂ ಉದ್ದೇಶಿತ ಸೌಲಭ್ಯ ಇಲ್ಲದ ವ್ಯವಸ್ಥೆ ನಮಗೆ ಬೇಕಿಲ್ಲ. ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ರೋಗಿಗಳಿಗೆ ಸಿಗಬೇಕು. ಒಂದು ವೇಳೆ ನಮ್ಮ ಆಶಯಕ್ಕೆ ತಕ್ಕ ಸೇವೆ ಸಿಗದಿದ್ದರೆ ಗುತ್ತಿಗೆ ರದ್ದಿಗೂ ಅವಕಾಶ ಇರಬೇಕು. ಕಾನೂನಿನ ತಕರಾರು ಎದುರಾಗದಂತೆ ಗುತ್ತಿಗೆ ಕರಾರು ರೂಪಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಐಡೆಕ್ ಕಂಪನಿ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News