ಭೀಮಾ ಕೋರೆಗಾಂವ್ ಪ್ರಕರಣ: ಸ್ಟ್ಯಾನ್ ಸ್ವಾಮಿ ಸೇರಿ 16 ಜನರ ಬಿಡುಗಡೆಗೆ ಗಣ್ಯರ ಒತ್ತಾಯ
ಬೆಂಗಳೂರು, ನ. 6: `ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಟ್ಯಾನ್ ಸ್ವಾಮಿ ಸೇರಿದಂತೆ 16 ಜನರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅಲ್ಲದೆ, ಅವರ ವಿರುದ್ಧದ ಎಲ್ಲ ಆರೋಪಗಳನ್ನು ಕೂಡಲೇ ಕೈಬಿಡಬೇಕು' ಎಂದು ಪಿಯುಸಿಎಲ್‍ನ ರಾಷ್ಟ್ರೀಯ ಉಪಾಧ್ಯಕ್ಷ ಮಿಹಿರ್ ದೇಸಾಯಿ, ಮಾಜಿ ಅಡ್ವಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, ಸಿಪಿಎಂನ ಜಿ.ಎನ್.ನಾಗರಾಜ್, ಸಿಪಿಐನ ಸಾತಿ ಸುಂದರೇಶ್, ದಸಂಸ ರಾಜ್ಯಾಧ್ಯಕ್ಷ ಆರ್.ಮೋಹನ್ ರಾಜ್, ಪಿಯುಸಿಎಲ್‍ನ ವೈ.ಜೆ. ರಾಜೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಗಣ್ಯರು ಆಗ್ರಹಿಸಿದ್ದಾರೆ.
ಶುಕ್ರವಾರ ಪಿಯುಸಿಎಲ್ ವತಿಯಿಂದ ಏರ್ಪಡಿಸಿದ್ದ ಆನ್‍ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣ್ಯರು ಹಾಗೂ ಮುಖಂಡರು, 83 ವರ್ಷದ ಹಿರಿಯರಾದ ಸ್ಟ್ಯಾನ್ ಸ್ವಾಮಿ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಿ, ಅವರಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಬೇಕು. ಯುಎಪಿಎ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಟ್ಟದ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
`ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಿರೋಧಿ ಧ್ವನಿಯನ್ನು ದಮನಿಸುತ್ತಿರುವ ಕೇಂದ್ರ ಸರಕಾರದ ಕ್ರಮ ಪ್ರಜಾತಂತ್ರ ವಿರೋಧಿ ನೀತಿಯಾಗಿದೆ. ಈ ಪ್ರಕರಣದಲ್ಲಿ ಬಂಧಿತ 16 ಮಂದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಪ್ರೊ.ರವಿವರ್ಮಕುಮಾರ್, ಕೇಂದ್ರ ಸರಕಾರ ಪ್ರಜಾಪ್ರಭುತ್ವ ಸರಕಾರವಲ್ಲ, ಬದಲಿಗೆ ಫ್ಯಾಸಿಸ್ಟ್ ಸರಕಾರ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಭೀಮಾ ಕೋರೆಂಗಾವ್ ಪ್ರಕರಣದಲ್ಲಿ 2018ರಲ್ಲಿ ನಡೆದ ಘಟನೆ ನೆಪದಲ್ಲಿ ಪ್ರಸಿದ್ಧ ಬುದ್ದಿಜೀವಿಗಳನ್ನು ಬಂಧಿಸಿರುವುದು, ಅವರಿಗೆ ಸುದೀರ್ಘ ಸಮಯ ಕಳೆದರೂ ಜಾಮೀನು ಸಿಗದಿರುವುದನ್ನು ನೋಡಿದರೆ ಇದು ನಿಜಕ್ಕೂ ವಿರೋಧದ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ. ಪ್ರಜಾಪ್ರಭುತ್ವದಲ್ಲಿ ಭಿನ್ನಾಬಿಪ್ರಾಯ ಇರಬೇಕು. ಆದರೆ, ವಿರೋಧಿಗಳಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಇದೇ ವೇಳೆ ಮಾತನಾಡಿದ ಸಿಪಿಎಂನ ಜಿ.ಎನ್.ನಾಗರಾಜ್, ಭೀಮಾ ಕೋರೆಗಾಂವ್ ಪ್ರಕರಣ ಸಂಘಪರಿವಾರದ ವ್ಯವಸ್ಥಿತ ಹುನ್ನಾರ. ಇದೊಂದು ರಾಜಕೀಯ ಒಳಸಂಚು, ಇದನ್ನು ರಾಜಕೀಯವಾಗಿಯೇ ನಾವಿಂದು ಎದುರಿಸಬೇಕು. ಕಾನೂನುಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ. 83 ವರ್ಷದ ವೃದ್ಧರಾಗಿರುವ ಸ್ಟ್ಯಾನ್ ಸ್ವಾಮಿ ಬಂಧನ ನಿಜಕ್ಕೂ ಹೇಡಿತನ ಎಂದು ವಾಗ್ದಾಳಿ ನಡೆಸಿದರು.
ದಸಂಸ ರಾಜ್ಯಾಧ್ಯಕ್ಷ ಆರ್.ಮೋಹನ್ ರಾಜ್, ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ಆಚರಣೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತವರ ಮೌಲ್ಯಗಳನ್ನು ನಾಶ ಮಾಡಲು ಭೀಮಾ ಕೋರೆಗಾಂವ್ ಪ್ರಕರಣದ ನೆಪದಲ್ಲಿ ಸಂಚು ಮಾಡಲಾಗಿದೆ. ಅಂಬೇಡ್ಕರ್ ಕುಟುಂಬದ ಸದಸ್ಯರೂ ಆಗಿರುವ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.