ಕರ್ನಾಟಕಕ್ಕೆ 'ಗೂಂಡಾರಾಜ್ಯ' ಖ್ಯಾತಿಯ ಉತ್ತರ ಪ್ರದೇಶ ಮಾದರಿ ಅಲ್ಲ: ಸಿದ್ದರಾಮಯ್ಯ

Update: 2020-11-06 16:01 GMT

ಬೆಂಗಳೂರು, ನ. 6: 'ಲವ್ ಜಿಹಾದ್' ತಡೆಗೆ ಕಾನೂನು ರೂಪಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರ ಘೋಷಣೆ, ಆಡಳಿತದ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಲ್ಲದೇ ಇನ್ನೇನಲ್ಲ. ಕೋಮುದ್ವೇಷವನ್ನು ಹುಟ್ಟುಹಾಕಿ ರಾಜಕೀಯದ ಬೇಳೆ ಬೇಯಿಸುವ ದುರುದ್ದೇಶವಲ್ಲದೇ ಬೇರೆ ಯಾವ ಸದುದ್ದೇಶ ಈ ಘೋಷಣೆಗೆ ಇಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ಲವ್ ಜಿಹಾದ್' ಎಂದರೆ ಏನು ಎನ್ನುವುದೇ ಸ್ಪಷ್ಟ ಇಲ್ಲದೆ ಇರುವಾಗ, `ಯಾವ ಕಾನೂನು ಕೂಡ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ' ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿರುವಾಗ, ಮುಖ್ಯಮಂತ್ರಿ ಯಡಿಯೂರಪ್ಪ ಯಾವ ಆಧಾರದಲ್ಲಿ ಕಾನೂನು ರೂಪಿಸಲು ಹೊರಟಿದ್ದಾರೆ?' ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

`ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ತಪ್ಪಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಕರ್ನಾಟಕ ರಾಜ್ಯದ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. `ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು' ಎಂದು ತೀರ್ಪು ಹೇಳಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಎಂದು ಹೇಳಿಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೆಲವು ಸಚಿವರು ಉತ್ತರಪ್ರದೇಶದ ಮುಖ್ಯಮಂತ್ರಿಯವರಿಂದ ಪ್ರೇರಿತರಾಗಿರುವುದು ದುರದೃಷ್ಟಕರ. ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ `ಗೂಂಡಾರಾಜ್ಯ' ಎಂಬ ಕುಖ್ಯಾತಿಯ ಉತ್ತರಪ್ರದೇಶ ಮಾದರಿ ಅಲ್ಲ, ಅಲ್ಲಿನ ಮುಖ್ಯಮಂತ್ರಿ ಪ್ರೇರಣೆಯೂ ಆಗಬಾರದು' ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸಿಎಂ ಮತ್ತು ಸಚಿವರಿಗೆ ಸಲಹೆ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News