ವಿಚಾರಣೆ ನಡೆಸುವಾಗ ನ್ಯಾಯಾಧೀಶರಿಗೆ ಜಾಗರೂಕತೆ, ಸಮಚಿತ್ತತೆ ಇರಬೇಕು: ಹೈಕೋರ್ಟ್ ಅಭಿಪ್ರಾಯ

Update: 2020-11-06 16:12 GMT

ಬೆಂಗಳೂರು, ನ.6: ನ್ಯಾಯಾಧೀಶರಿಗೆ ಸ್ವಂತದ ನಿಲುವು ಎಂಬುದು ಯಾವುದೂ ಇರುವುದಿಲ್ಲ. ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಸಮಚಿತ್ತರಾಗಿ ಮತ್ತು ಜಾಗರೂಕರಾಗಿ ಇರಬೇಕು ಎಂದು ತುಂಬು ಗರ್ಭಿಣಿಯೊಬ್ಬರ ಸಾವಿನ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುವಾಗ ಅಭಿಪ್ರಾಯ ವ್ಯಕ್ತಪಡಿಸಿದೆ.

ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ಶಿಕ್ಷೆಗೆ ಒಳಗಾಗಿದ್ದ ಪತಿ ಹಾಗೂ ಆತನ ತಮ್ಮ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡುವ ವೇಳೆ ನ್ಯಾ.ಎಸ್.ಸುನಿಲ್ ದತ್ ಯಾದವ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಧೀಶರು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಭಾವೋದ್ರೇಕಕ್ಕೆ ಒಳಗಾಗದೆ, ಬಹಳ ಎಚ್ಚರಿಕೆಯಿಂದ ಸಾಕ್ಷ್ಯಗಳನ್ನು ಪರಿಗಣಿಸಿ ಆದೇಶ ನೀಡಬೇಕು. ಭಾವೋದ್ರೇಕಕ್ಕೆ ಕಾನೂನಿನಲ್ಲಿ ಮಹತ್ವವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣವೇನು: 2013ರ ಜುಲೈ 2ರಂದು ವಿಜಯಪುರ ಜಿಲ್ಲೆಯ ಅಥಣಿ ತಾಲೂಕಿನ ಹೊನವಾಡ ಗ್ರಾಮದಲ್ಲಿ 7 ತಿಂಗಳ ಗರ್ಭಿಣಿ ಲಕ್ಷ್ಮಿ ಸಾವನ್ನಪ್ಪಿದ್ದರು.

ಪತಿ ಯಂಕಪ್ಪ, ಆತನ ಸೋದರ ಹಣಮಂತ ಹಾಗೂ ಇವರ ಪೋಷಕರು ಲಕ್ಷ್ಮಿಗೆ ನಿಂದಿಸುತ್ತಿದ್ದು, ಜುಲೈ 2ರ ಸಂಜೆ 4 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಜಗಳವಾಗಿ ಪತಿ ಯಂಕಪ್ಪ ಆಕೆಗೆ ಥಳಿಸಿದ್ದ. ಇದೇ ವೇಳೆ ಸಂಬಂಧಿ ಕರೆಪ್ಪ ಬಿಡಿಸಲು ಹೋದಾಗ ಆತನಿಗೂ ಥಳಿಸಿದ್ದರು. ನಂತರ ಸಮೀಪದ ಬಾವಿಯವರೆಗೂ ಎಳೆದೊಯ್ದು ಬಾವಿಗೆ ಎಸೆದಿದ್ದರು. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಈ ವಿಚಾರವನ್ನು ಬಹಿರಂಗಪಡಿಸದಂತೆ ಕರೆಪ್ಪನಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿತ್ತು.

ಹೈಕೋರ್ಟ್ ಆದೇಶ: ಶಿಕ್ಷೆಗೆ ಗುರಿಯಾಗಿದ್ದ ಯಂಕಪ್ಪ ಹಾಗೂ ಹಣಮಂತ ಇಬ್ಬರೂ ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 2014ರ ಡಿಸೆಂಬರ್ 31 ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುನಿಲ್ ದತ್ ಯಾದವ್ ನೇತೃತ್ವದ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗರ್ಭಿಣಿ ಮಹಿಳೆಯ ಸಾವಿನ ವಿಚಾರದಲ್ಲಿ ಭಾವೋದ್ವೇಗಕ್ಕೆ ಒಳಗಾಗಿರುವಂತೆ ಕಾಣುತ್ತಿದೆ. ಹಾಗೆಯೇ ಬಲವಾದ ಅನುಮಾನದ ಆಧಾರದಲ್ಲಿ ಶಿಕ್ಷೆ ವಿಧಿಸಿದ್ದಾರೆ. ಆದರೆ ನ್ಯಾಯಾಲಯ ನಿರ್ಣಯಕ್ಕೆ ಬರುವ ಮುನ್ನ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಪರಿಗಣಿಸಬೇಕು. ಕಾನೂನು ಅನುಮಾನದ ಆಧಾರದ ಮೇಲೆ ಶಿಕ್ಷಿಸುವುದನ್ನು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೇ, ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವ ವ್ಯಕ್ತಿಗಳು ಆರೋಪಿಗಳ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಸ್ಥಳೀಯ ತಹಶೀಲ್ದಾರ್ ಕೂಡ ಆರೋಪಿಗಳ ವಿರುದ್ಧ ವರದಿ ಹಾಗೂ ಹೇಳಿಕೆ ನೀಡಿಲ್ಲ. ಪ್ರಾಸಿಕ್ಯೂಷನ್ ಕೂಡ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿಲ್ಲ. ಹೀಗಾಗಿ ಬಲವಾದ ಅನುಮಾನದ ಆಧಾರದ ಮೇಲೆ ಆರೋಪಿಗಳಿಗೆ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಡಿ ನೀಡಿರುವ ಶಿಕ್ಷೆ ಸೂಕ್ತವೆನ್ನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News