ಮಾರ್ಚ್ ವೇಳೆಗೆ ರಾಜ್ಯದಲ್ಲಿ 1 ಸಾವಿರ ಜನೌಷಧಿ ಕೇಂದ್ರ: ಡಿ.ವಿ.ಸದಾನಂದಗೌಡ

Update: 2020-11-06 16:39 GMT

ಬೆಂಗಳೂರು, ನ.6: 2021ರ ಮಾರ್ಚ್ ಅಂತ್ಯದೊಳಗೆ ರಾಜ್ಯದಲ್ಲಿ ಒಟ್ಟು 1ಸಾವಿರ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದಿಲ್ಲಿ ಹೇಳಿದ್ದಾರೆ.

ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ವತಿಯಿಂದ ಹುಬ್ಬಳ್ಳಿಯಲ್ಲಿ ಆರಂಭಿಸಲಾಗುತ್ತಿರುವ ಜನೌಷಧಿ ಸಗಟು ವಿತರಣಾ ಕೇಂದ್ರವನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದ ವರ್ಚವಲ್ ಸಭೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಸ್ಥೆಯೊಂದಕ್ಕೆ ಜನೌಷಧಿ ವಿತರಣಾ ಜವಾಬ್ದಾರಿ ನೀಡಲಾಗಿದೆ. ರಾಜ್ಯ ಸಹಕಾರ ಮಾರಾಟ ಮಹಮಂಡಲದವರು ಇದನ್ನು ಚೆನ್ನಾಗಿ ನಿಭಾಯಿಸುತ್ತಾರೆಂಬ ಸಂಪೂರ್ಣ ವಿಶ್ವಾಸ ತಮಗಿದೆ. ಇದರಿಂದ ಜನೌಷಧಿಯ ಸರಬರಾಜನ್ನು ರಾಜ್ಯದ ಮೂಲೆಮೂಲೆಗೂ ವಿಶೇಷವಾಗಿ ಗ್ರಾಮಾಂತರ ಭಾಗಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದೇಶಾದ್ಯಂತ 6600 ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 715 ಜನೌಷಧಿ ಕೇಂದ್ರಗಳು ಇದ್ದು ಈ ಸಂಖ್ಯೆಯನ್ನು 2021ರ ಮಾರ್ಚ್ ಅಂತ್ಯದ ವೇಳೆಗೆ ಒಂದು ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.

ಜನೌಷಧಿಯ ದರ ಉಳಿದ ಬ್ರಾಂಡೆಡ್ ಔಷಧಗಳಿಗೆ ಹೋಲಿಸಿದರೆ ಶೇ.10ರಿಂದ ಶೇ.90ರಷ್ಟು ಕಡಿಮೆಯಿದೆ. ದರ ಕಡಿಮೆ ಇದೆ ಅಂದಾಕ್ಷಣ ಜನೌಷಧಿಯ ಗುಣಮಟ್ಟದಲ್ಲಿ ಕೊರತೆಯಿದೆ ಎಂದು ತಿಳಿಯಬೇಕಾಗಿಲ್ಲ. ಜನೌಷಧಿ ಕೇಂದ್ರಗಳಲ್ಲಿ 1270ಕ್ಕಿಂತ ಹೆಚ್ಚು ಬಗೆಯ ಮಾತ್ರೆ ಹಾಗೂ ಔಷಧಗಳು ಲಭ್ಯವಿವೆ. ಹಾಗೆಯೇ 160 ನಮೂನೆಯ ವೈದ್ಯಕೀಯ ಉಪಕರಣಗಳು ಲಭ್ಯವಿವೆ ಎಂದರು.

ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿವೆ. ಸಾಮಾನ್ಯ ಜನ ಇದರ ಉಪಯೋಗ ಪಡೆದುಕೊಳ್ಳಬೇಕು. ಜನೌಷಧ ಕೇಂದ್ರಗಳಲ್ಲಿ ಇನ್ನು ಮೇಲೆ ಕೆಲವು ಆಯುರ್ವೇದ ಔಷಧಗಳನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಸ್ವಾಗತ ಕೋರಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, `ಜನರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಸಹಯೋಗದಲ್ಲಿ ಹೆಚ್ಚೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯದಲ್ಲಿ ಜನೌಷಧದ ಲಾಭವನ್ನು ಬಡವರಿಗೆ ತಲುಪಿಸಲು ಸಹಕಾರ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಮಹಾ ಮಂಡಲದ ಕಾರ್ಯಕ್ರಮದ ನಂತರ ಕೇಂದ್ರ ಸಚಿವ ಸದಾನಂದ ಗೌಡ ಅವರು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬಾಗಲೂರಿನಲ್ಲಿ ರಾಜ್ಯದ 716ನೆ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News