×
Ad

ರಾಜ್ಯದ ಹಲವು ತಾಣಗಳ ಸಂರಕ್ಷಣೆ, ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು

Update: 2020-11-06 22:39 IST

ಬೆಂಗಳೂರು, ನ.6: ರಾಜ್ಯದ 9 ಸ್ಥಳಗಳಲ್ಲಿ ಮತ್ಸ್ಯಧಾಮ ಸಂರಕ್ಷಣಾ ವಲಯಕ್ಕೆ ಶಿಫಾರಸು, ಗುಡಿಬಂಡೆ ತಾಲೂಕು ಆದಿನಾರಾಯಣ ಸ್ವಾಮಿ ಬೆಟ್ಟವನ್ನು ರಾಜ್ಯ ಜೈವಿಕ ಪಾರಂಪರಿಕ ತಾಣ ಎಂದು ಘೋಷಿಸಲು, ಕುಮಾರಧಾರ ನದಿ ತೀರ ಉರುಂಬಿಗೆ ಸೂಕ್ಷ್ಮ ಜೈವಿಕ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ತಾಣಗಳ ಸಂರಕ್ಷಣೆಗೆ ಹಾಗೂ ಮಾನ್ಯತೆಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಕಳೆದ ಅ.22ರಂದು ಬೆಂಗಳೂರಿನಲ್ಲಿ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸೋಂದಾ ಮುಂಡಿಗೆಕೆರೆಯನ್ನು ಪಕ್ಷಿಧಾಮ ಎಂದು ಘೋಷಿಸಲು ವನ್ಯಜೀವಿ ಇಲಾಖೆಗೆ ಶಿಫಾರಸು, ಹಾಸನದ ರಾಜಮುಡಿ ಭತ್ತ, ಕುಮಟಾ ಕಗ್ಗ ಭತ್ತ, ಅಂಕೋಲಾದ ಕರೇಈಶಾಡು ಬೆಳೆಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಟರ್ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ.

ನೆಲಮಂಗಲ ತಾಲೂಕು ಮಹಿಮಾರಂಗ ಬೆಟ್ಟ, ಹಾಗೂ ಕೋಲಾರದ ಅಂತರಗಂಗೆ ಬೆಟ್ಟ ಈ ಸ್ಥಳಗಳನ್ನು ಜೀವ ವೈವಿಧ್ಯ ತಾಣ ಎಂದು ಮಂಡಳಿ ಗುರುತಿಸಿದೆ. ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ಶಕುನಗಿರಿ ಬೆಟ್ಟ ಅಪರೂಪದ ತಾಣವಾಗಿದೆ. ಪಕ್ಕದಲ್ಲೇ ಇರುವ ಹೊಗರೇಕಾನುಗಿರಿ ಪಾರಂಪರಿಕ ತಾಣಕ್ಕೆ ಈ ಬೆಟ್ಟ ಪ್ರದೇಶವನ್ನು ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗಿದೆ.

ಶಿರಸಿ ತಾಲೂಕು ಸೋಂದಾ ಗ್ರಾಮದ ಮುಂಡಿಗೆಕೆರೆ ಬೆಳ್ಳಕ್ಕಿಗಳ ತವರೂರಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಈಗಾಗಲೇ ಜೈವಿಕ ತಾಣ ಎಂದು ಗುರುತಿಸಿದೆ. ಸ್ಥಳೀಯ ಜನತೆ ಪಕ್ಷಿಧಾಮ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಜೀವವೈವಿಧ್ಯ ಮಂಡಳಿ ಪುರಸ್ಕರಿಸಿದೆ. ವನ್ಯಜೀವಿ ಇಲಾಖೆಗೆ ಮುಂಡಿಗೆಕೆರೆ ಪಕ್ಷಿಧಾಮ ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ರಾಜ್ಯದ 8 ಸ್ಥಳಗಳಲ್ಲಿ ಜೀವವೈವಿಧ್ಯ ಮಂಡಳಿ ಮತ್ಸ್ಯಧಾಮಗಳನ್ನು ಗುರುತಿಸಿ ಘೊಷಿಸಿದೆ. ಮೀನುಗಾರಿಕಾ ಇಲಾಖೆ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಇನ್ನೂ 7 ಸ್ಥಳಗಳಲ್ಲಿ ಅಪರೂಪದ ಮೀನು ವೈವಿಧ್ಯ ತಾಣಗಳನ್ನು ಗುರುತಿಸಿ ಘೊಷಣೆ ಮಾಡಲು ಮಂಡಳಿ ನಿರ್ಧರಿಸಿದೆ. ಮೀನುಗಾರಿಕಾ ಇಲಾಖೆ ಜೊತೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ರಾಜ್ಯದ ಕುಮಟಾ ತಾಲ್ಲೂಕಿನ ಗಜನಿ ಕಗ್ಗಭತ್ತ, ಹಾಸನದ ರಾಜಮುಡಿ ಅಕ್ಕಿ ಹಾಗೂ ಅಂಕೋಲಾ ತಾಲ್ಲೂಕಿನ ಕರೇ ಈಶಾಡು ಮಾವಿನ ಹಣ್ಣು ಈ ಮೂರು ವಿನಾಶದ ಅಂಚಿನ ಕೃಷಿ ಮತ್ತು ತೋಟಗಾರಿಕಾ ಜೀವವೈವಿಧ್ಯ ತಳಿಗಳ ಉಳಿವಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ವಿಶೇಷ ಗಮನ ನೀಡಿದೆ. ಈ ತಳಿಗಳಿಗೆ ಕೇಂದ್ರ ಸರಕಾರ ಜಿಯಾಗ್ರಫಿಕಲ್ ಇಂಡಿಕೇಟರ್ ಸ್ಥಾನಮಾನ ನೀಡಬೇಕು ಎಂದು ಮಂಡಳಿ ಶಿಫಾರಸು ಮಾಡಿದೆ.

ಜೀವವೈವಿಧ್ಯ ಮಂಡಳಿ ಈ ಹಿಂದೆ ರಾಜ್ಯದಲ್ಲಿ 10 ಪಾರಂಪರಿಕ ವೃಕ್ಷಗಳನ್ನು ಗುರುತಿಸಿದೆ. ಇನ್ನಷ್ಟು ಪಾರಂಪರಿಕ ವೃಕ್ಷಗಳನ್ನು ಗುರುತಿಸಲು ಮುಂದಾಗಲಿದೆ. ರಾಜ್ಯಮಟ್ಟದ ಮಹಾನ್ ಪಾರಂಪರಿಕ ವೃಕ್ಷಗಳನ್ನು ಜೀವವೈವಿಧ್ಯ ಕಾಯಿದೆ ಅಡಿಯಲ್ಲಿ ಘೋಷಣೆ ಮಾಡಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ ಸರಕಾರದ ಒಪ್ಪಿಗೆ ಪಡೆಯಬೇಕು. ಈ ಪ್ರಕ್ರಿಯೆ ನಡೆಸಲು ಮಂಡಳಿ ನಿರ್ಧಾರಕೈಗೊಂಡಿದೆ.

ಗ್ರಾಮ ಸಾಮೂಹಿಕ ಭೂಮಿ, ಗ್ರಾಮ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ಜೀವವೈವಿಧ್ಯ ಮಂಡಳಿ ಸಮೀಕ್ಷೆ ನಡೆಸಿ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲಿದೆ ಎಂದು ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News