ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲ್ತುವಾರಿ ಸಮಿತಿ ಮಾರ್ಪಾಡಿಗೆ ಸಿಎಂ ಸೂಚನೆ

Update: 2020-11-07 11:29 GMT

ಬೆಂಗಳೂರು, ನ. 7: ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸರಕಾರ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಮಾರ್ಪಾಡು ಮಾಡಲು ಕೋರಿ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ನೇತೃತ್ವದ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಮಿತಿ ಮಾರ್ಪಾಡು ಮಾಡಲು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದ್ದಾರೆ.

ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶಾಸಕ ಹರತಾಳು ಹಾಲಪ್ಪ, ಶ್ರೀ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಜನಾಂಗಗಳ ಸ್ವಾಮೀಜಿಗಳ ನಿಯೋಗ, ಸಿಗಂದೂರು ಚೌಡೇಶ್ವರಿ ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ನಿವಾರಣೆ, ಭಕ್ತರ ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂದು ಕೋರಿತು.

ಈ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಚೌಡೇಶ್ವರಿ ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ಇಲ್ಲಿ ಭಕ್ತರು ನೀಡುವ ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂಬುದು ಭಕ್ತರ ಇಚ್ಛೆಯಾಗಿದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈಗ ರಚನೆಯಾಗಿರುವ ಸಮಿತಿಯಲ್ಲಿ ತಮ್ಮ ಮನವಿಯಂತೆ ಈಡಿಗ ಸಮುದಾಯದ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಸ್ವಾಮೀಜಿಗಳ ಸಲಹೆ, ಮಾರ್ಗದರ್ಶನ ತೆಗೆದುಕೊಂಡು ಸಮಿತಿ ಕಾರ್ಯನಿರ್ವಹಿಸಲಿದೆ. ಇದೀಗ ರಚನೆಯಾಗಿರುವ ಸಮಿತಿ ಸದ್ಯ ನಾಲ್ಕು ತಿಂಗಳವರೆಗೆ ಮುಂದುವರಿಯಲಿದೆ. ಬಳಿಕ ಸಮಿತಿ ಇರಬೇಕೋ ಅಥವಾ ಅದನ್ನು ಕೈಬಿಡಬೇಕೊ ಎಂಬ ಬಗ್ಗೆ ನಿರ್ಧರಿಸಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಡಿಗ ಸಮುದಾಯ ಮತ್ತು ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಅಭಯ ನೀಡಿದರು. ನಿಯೋಗದಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿಗಳು ಹಾಗೂ ಈಡಿಗ ಸಮುದಾಯದ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News