ಸರಳ ದೀಪಾವಳಿ ಆಚರಣೆಗೆ ಸರಕಾರ ನಿರ್ದೇಶನ: 'ಹಸಿರು ಪಟಾಕಿ' ಮಾರಾಟಕ್ಕಷ್ಟೇ ಅವಕಾಶ
ಬೆಂಗಳೂರು, ನ. 7: ಕೋವಿಡ್-19 ಸೋಂಕಿನ ಹಿನ್ನೆಲೆಯ ದೀಪಾವಳಿ ಹಬ್ಬವನ್ನು ಸರಳ, ಅರ್ಥಗರ್ಭಿತ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಬೇಕು ಎಂದು ನಿರ್ದೇಶನ ನೀಡಿರುವ ರಾಜ್ಯ ಸರಕಾರ, `ಹಸಿರು ಪಟಾಕಿ' ಬಿಟ್ಟು ಉಳಿದ ಇತರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡತಕ್ಕದ್ದಲ್ಲ ಮತ್ತು ಹಚ್ಚತಕ್ಕದಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಶನಿವಾರ ಆದೇಶ ಹೊರಡಿಸಿದ್ದಾರೆ.
`ಕೊರೋನ ವೈರಸ್ ಸೋಂಕಿತರ ಆರೋಗ್ಯದ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ತಜ್ಞರ ಶಿಫಾರಸ್ಸನ್ನು ಆಧರಿಸಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆ ಸಂಪೂರ್ಣ ನಿಷೇಧಿಸಲಾಗುವುದು' ಎಂದು ನಿನ್ನೆ ಪ್ರಕಟಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊನೆಯ ಕ್ಷಣದಲ್ಲಿ `ಹಸಿರು ಪಟಾಕಿ'ಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ರಾಜ್ಯ ಸರಕಾರ ಈ ಸಂಬಂಧ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಅನುಮತಿಸಿರುವ `ಹಸಿರು ಪಟಾಕಿ' ಮಾರಾಟಕ್ಕೆ ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಳ್ಳಬೇಕು. ನ.7ರಿಂದ ನ.16ರ ವರೆಗೆ, ನಿಗದಿತ ಸ್ಥಳಗಳಲ್ಲಿ ಮಾತ್ರ `ಹಸಿರು ಪಟಾಕಿ' ಮಾರಾಟ ಮಳಿಗೆಗಳನ್ನು ತೆರೆದಿರತಕ್ಕದ್ದು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ `ಹಸಿರು ಪಟಾಕಿ' ಮಾರಾಟ ಮಾಡಬೇಕು.
ಮಾರಾಟ ಮಳಿಗೆಗಳ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡುವುದು, ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಅಥವಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಈ ವೇಳೆ ಯಾವುದೇ ರೀತಿಯ ಜನದಟ್ಟಣೆ ಉಂಟಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳತಕ್ಕದ್ದು. ಮೇಲ್ಕಂಡ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.