×
Ad

‘ರಾಜ್ಯ ಸೇವಾ ನಾಗರಿಕ ಕರಡು ನಿಯಮ’: ತಜ್ಞರಿಂದ ವರದಿ ತರಿಸಿಕೊಳ್ಳುವಂತೆ ಸಿದ್ದರಾಮಯ್ಯ ಒತ್ತಾಯ

Update: 2020-11-07 18:04 IST

ಬೆಂಗಳೂರು, ನ.7: ರಾಜ್ಯ ಸರಕಾರ ಪ್ರಕಟಿಸಿರುವ ಕರ್ನಾಟಕ ಸೇವಾ ನಾಗರಿಕ(ನಡತೆ) ನಿಯಮ 2020 ಕರಡು ನಿಯಮಗಳು ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಈ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ತರಿಸಿಕೊಂಡು ವಿಧಾನಮಂಡಲದಲ್ಲಿ ಚರ್ಚೆಗೊಳಪಡಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಅವಸರದ ನಿರ್ಧಾರ ಬೇಡ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕರ್ನಾಟಕ ಸೇವಾ ನಾಗರಿಕ(ನಡತೆ) ನಿಯಮದ ಕರಡನ್ನು ಓದಿದರೆ ಇದು ಸರಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಗುಪ್ತ ಕಾರ್ಯಸೂಚಿಯನ್ನು ಹೊಂದಿದೆ ಎಂಬ ಅನುಮಾನ ಮೂಡಿಸುತ್ತದೆ. ನೀತಿ ಸಂಹಿತೆಗಳು ಸ್ವಯಂಸ್ಪೂರ್ತಿಯಿಂದ ಪಾಲಿಸುವಂತಾಗಬೇಕೇ ಹೊರತು ಬಲವಂತದ ಹೇರಿಕೆಯಿಂದ ಅಲ್ಲ ಎಂದು ತಿಳಿಸಿದ್ದಾರೆ.

ನಾಗರಿಕ(ನಡತೆ) ನಿಯಮದ ಕರಡಿನಲ್ಲಿ ಸರಕಾರಿ ನೌಕರರ ಕುಟುಂಬದ ಸದಸ್ಯರನ್ನೂ ನಿಯಂತ್ರಿಸಲು ಹೊರಟಿರುವುದು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ಖಂಡಿತ ಒಪ್ಪಲು ಸಾಧ್ಯ ಇಲ್ಲ. ಸರಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಕರಡಿಗೆ ಅಂತಿಮ ರೂಪ ಕೊಡಲು ಹೊರಟರೆ ಸೂಕ್ತ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನಿಸಿದಾಗ, ಸರಕಾರವು ನೌಕರರನ್ನು ತನ್ನ ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದ ಹಾಗೆ ಕಾಣುತ್ತಿದೆ. ಸಮಾಜದಲ್ಲಿ ಜ್ಞಾನ-ವಿಜ್ಞಾನ ದ್ವೇಷಿಯಾದ ವಾತಾವರಣ ನಿಧಾನವಾಗಿ ವ್ಯಾಪಿಸುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದಷ್ಟು ಪ್ರಮಾಣದಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುತ್ತಿಲ್ಲ. ಗುಣಮಟ್ಟದ ಪ್ರಕಟಣೆ ಆಗುತ್ತಿಲ್ಲ. ಕಾಲೇಜುಗಳಲ್ಲೂ ಇದೇ ರೀತಿಯ ವಾತಾವರಣವಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮಲ್ಲಿ ಸಮಾಜ ವಿಜ್ಞಾನ, ಸಾಹಿತ್ಯ, ವಿಜ್ಞಾನ, ರಾಜಕೀಯ, ಆರ್ಥಿಕತೆ, ಪರಿಸರ ಮುಂತಾದ ವಿಚಾರಗಳಲ್ಲಿ ಅತ್ಯಂತ ಕಳಪೆ ಎನ್ನುವ ಕೆಲಸಗಳು ನಡೆಯುತ್ತಿವೆ ಎಂಬ ಜಾಗತಿಕ ಮಟ್ಟದ ವರದಿ/ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಜ್ಞಾನ ವಿಜ್ಞಾನ ಕ್ಷೇತ್ರಗಳಲ್ಲಿ ಅವನತಿಗೊಂಡ ಸಮಾಜವು ಯಾವ ರೀತಿಯಲ್ಲೂ ಏಳಿಗೆ ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಪಂಚದ ನೂರು ವಿಜ್ಞಾನ ನಗರಗಳಲ್ಲಿ ಬೆಂಗಳೂರು 95 ನೇ ಸ್ಥಾನದಲ್ಲಿದೆ ಎಂಬುದು ನಮಗೆಲ್ಲಾ ನಾಚಿಕೆ ತರಿಸುವ ಸಂಗತಿಯಾಗಿದೆ. ನೌಕರರು, ಉಪನ್ಯಾಸಕರು, ಪ್ರಾಧ್ಯಾಪಕರು ತಮ್ಮ ಉದ್ಯೋಗವನ್ನು ನಿಷ್ಠೆಯಿಂದ ಮಾಡುವುದರ ಜತೆಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗದಂತೆ ಮುಕ್ತವಾಗಿ ಜ್ಞಾನ ವಿಜ್ಞಾನಗಳ ಬೆಳವಣಿಗೆಗೆ ಸರಕಾರವು ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಅಗತ್ಯವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. 

ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಮೇಲ್ಪಂಕ್ತಿ ಆಗುವ ಕೆಲವು ವಿದ್ವಾಂಸರು ವಿಶ್ವ ವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಇದ್ದಾರೆ. ಮತ್ತೆ ಕೆಲವರು ಸರಕಾರಿ ನೌಕರಿಗಳಲ್ಲೂ ಇದ್ದಾರೆ. ಅದೇ ರೀತಿ ಬರೆಯಬೇಡಿ, ಓದಬೇಡಿ, ಸಂಶೋಧನೆ ಮಾಡಬೇಡಿ ಎಂದರೆ ಸಂಭ್ರಮಿಸುವ, ಖುಷಿಪಡುವ ದಡ್ಡರೂ, ಸೋಮಾರಿಗಳೂ ಇದ್ದಾರೆ. ಸರಕಾರ ತರಲು ಹೊರಟಿರುವ ನಿಯಮಗಳು ಇಂಥವರಿಗೆ, “ತೂಕಡಿಸುತ್ತಿದ್ದವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಸೋಮಾರಿಗಳ ಕಿವಿ ಹಿಂಡಿ ಸಂಶೋಧನೆ, ಅಧ್ಯಯನಗಳಲ್ಲಿ ಗಂಭೀರವಾಗಿ ತೊಡಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಉತ್ತಮ ಕೆಲಸ ಮಾಡುತ್ತಿರುವವರನ್ನು ಮತ್ತಷ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿದೆ. ಸರಕಾರಗಳು ಅಧ್ಯಯನ ಮತ್ತು ಸಂಶೋಧನೆಗಳನ್ನು ಪ್ರೋತ್ಸಾಹಿಸುವ ಬದಲು ನಿಷ್ಕ್ರಿಯಗೊಳಿಸಲು ಹೊರಟಿರುವುದು ಸಾಮಾಜಿಕ ಏಳಿಗೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದುದರಿಂದ, ಸಂವಿಧಾನದ ಆಶಯಗಳನ್ನು ಗೌರವಿಸಿ ಅದಕ್ಕೆ ಬದ್ದವಾಗಿ ನಡೆದುಕೊಂಡು, ಯಾವುದೇ ರೀತಿಯ ಸಾಹಿತ್ಯ, ಸಂಶೋಧನೆ, ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅದೇ ರೀತಿಯಲ್ಲಿ ಸರಕಾರಿ ನೌಕರರ ಕುಟುಂಬದವರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ನಿಯಮಗಳನ್ನು ತರಲು ಹೊರಟಿರುವುದು ಸಂಪೂರ್ಣ ಮಾನವ ವಿರೋಧಿಯಾದ ಫ್ಯಾಸಿಸ್ಟ್ ರೀತಿಯ ನಡವಳಿಕೆಯಂತೆ ಕಾಣುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಡ ಕೊಲೆಗಾರನಾದರೆ ಪತ್ನಿಗೆ, ಕುಟುಂಬಕ್ಕೆ ಶಿಕ್ಷೆ ಕೊಡಲಾಗುತ್ತದೆಯೇ ? ನೀವು ತರಲು ಹೊರಟಿರುವ ಕಾನೂನು, “ಸರಕಾರಿ ನೌಕರ ಸರಕಾರದ ಗುಲಾಮ-ಸರಕಾರಿ ನೌಕರರ ಪತ್ನಿ ಮತ್ತು ಮಕ್ಕಳು ಹಾಗೂ ಅವಲಂಬಿತರು ನೌಕರನ ಗುಲಾಮರು” ಎಂದು ನಿರೂಪಿಸಿದಂತಾಗುತ್ತದೆ. ಇದು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಆದುದರಿಂದ, ಯಾವುದೇ ಕಾರಣಕ್ಕೂ ಈ ರೀತಿಯ ಧೂರ್ತ ಹಾಗೂ ಅಮಾನವೀಯ ನಿಯಮಗಳನ್ನು ತರಬಾರದು ಎಂದು ಅವರು ಆಗ್ರಹಿಸಿದ್ದಾರೆ.

ತಜ್ಞರ ಸಮಿತಿಯೊಂದನ್ನು ನೇಮಿಸಿ ಬೇರೆ ಬೇರೆ ದೇಶಗಳಲ್ಲಿ ಯಾವ ಯಾವ ಕಾನೂನುಗಳನ್ನು ಅಳವಡಿಸಿಕೊಂಡಿದ್ದಾರೆಂದು ಅಧ್ಯಯನ ನಡೆಸಬೇಕು. ಬಳಿಕ ಅವುಗಳಲ್ಲಿ ಉತ್ತಮವಾದ ಕಾನೂನುಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕು. ಸರಕಾರ ಈ ಕುರಿತು ಆತುರ ಪಡದೆ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ ನಿಯಮಗಳನ್ನು ಅಂತಿಮಗೊಳಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News