×
Ad

ಕೋರ್ಟ್ ತಡೆಯಾಜ್ಞೆ ಆದೇಶ ಉಲ್ಲಂಘಣೆ ಆರೋಪ: ಡಿಸಿಪಿ ಸೀಮಾಗೆ ಶೋಕಾಸ್ ನೋಟಿಸ್

Update: 2020-11-07 18:48 IST

ಬೆಳಗಾವಿ, ನ.7: ಕೋರ್ಟ್ ತಡೆಯಾಜ್ಞೆ ಆದೇಶ ಉಲ್ಲಂಘಿಸಿರುವ ಆರೋಪದಡಿ ನಿಕಟಪೂರ್ವ ಡಿಸಿಪಿ ಸೀಮಾ ಲಾಟ್ಕರ್ ಅವರಿಗೆ ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿದೆ.

ಇಲ್ಲಿನ ಗಾಂಧಿನಗರದ ನಿವಾಸಿ ಮಲ್ಲಿಕ್ ಜಾನ್ ಪಠಾಣ್ ಹಾಗೂ ಸಂಬಂಧಿಕರಿಗೆ ಸೇರಿದ ಆಸ್ತಿ ವ್ಯಾಜ್ಯ ಸಂಬಂಧ ಸಿಆರ್‍ಪಿಸಿ ಕಲಂ 107ರಡಿ ಡಿಸಿಪಿ ಸೀಮಾ ಲಾಟ್ಕರ್ ವಿಚಾರಣೆಗೊಳಪಡಿಸಿ ಜೂ.6 ರಂದು ನೋಟಿಸ್ ಜಾರಿಗೊಳಿಸಿದ್ದರು.

ಇದನ್ನು ಪ್ರಶ್ನಿಸಿ ಮಲ್ಲಿಕ್ ಜಾನ್ ಪಠಾಣ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ತದನಂತರ, ಸೀಮಾ ಲಾಟ್ಕರ್ ಹೊರಡಿಸಿದ್ದ ನೋಟಿಸ್‍ಗೆ ಬೆಳಗಾವಿ ನ್ಯಾಯಾಲಯ ಜೂ.29 ಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಇದರ ಪ್ರತಿಯನ್ನು ಮಲ್ಲಿಕ್ ಜಾನ್ ಪಠಾಣ್ ಆಯುಕ್ತರ ಕಚೇರಿಗೆ ತಲುಪಿಸಿದ್ದರು.

ಇದಾದ ನಂತರವೂ ಅ.9 ರಂದು ಇದೇ ಪ್ರಕರಣದಡಿ ವಿಚಾರಣೆ ನಡೆಸಿದ್ದ ಸೀಮಾ ಲಾಟ್ಕರ್, ಮಲ್ಲಿಕ್ ಜಾನ್‍ಗೆ ಪುನಃ ನೋಟಿಸ್ ನೀಡಿದ್ದರು. ಆದರೆ, ತಡೆಯಾಜ್ಞೆ ಇದ್ದರೂ ಮತ್ತೇ ನೋಟಿಸ್ ನೀಡಿದ್ದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ನ.26ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ 10 ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೇಮಂತ್ ಅವರು ಸೀಮಾ ಲಾಟ್ಕರ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News