ಚೆಕ್ ಬೌನ್ಸ್ ಪ್ರಕರಣ: ಕಾಫಿ ಡೇ ಸಿದ್ದಾರ್ಥ ಪತ್ನಿ ಮಾಳವಿಕಾಗೆ ಜಾಮೀನು ಮಂಜೂರು
ಚಿಕ್ಕಮಗಳೂರು, ನ.7: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಲ್ಲಿದ್ದ ಕಾಫಿ ಡೇ ಮಾಲಕ ದಿ.ಸಿದ್ದಾರ್ಥ ಹೆಗಡೆ ಅವರ ಪತ್ನಿ ಹಾಗೂ ಎಬಿಸಿ ಸಂಸ್ಥೆಯ ನಿರ್ದೇಶಕಿ ಮಾಳವಿಕ ಹೆಗ್ಡೆಯವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಶನಿವಾರ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯ ಮಾಳವಿಕ ಸೇರಿದಂತೆ 8 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಎಬಿಸಿ, ಕಾಫಿ ಡೇ ಸಂಸ್ಥೆಗಳ ಮಾಲಕ ಸಿದ್ದಾರ್ಥ ಹೆಗಡೆ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದು, ನಂತರ ಅವರ ಪತ್ನಿ ಮಾಳವಿಕರವರು ಸಂಸ್ಥೆಯ ನಿದೇಶಕಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹಿಂದೆ ಜಿಲ್ಲೆಯ ನೂರಾರು ಕಾಫಿ ಬೆಳೆಗಾರರು ಕಾಫಿ ಡೇ ಕಂಪೆನಿಗೆ ಮಾರಾಟ ಮಾಡಿದ್ದ ಕಾಫಿಗೆ ಕಂಪೆನಿಯುವ ಬೆಳೆಗಾರರಿಗೆ ಚೆಕ್ ನೀಡಿದ್ದು, ಈ ಚೆಕ್‍ಗಳು ಅಮಾನ್ಯಗೊಂಡಿದ್ದವು. ಇದರಿಂದ ಕಾಫಿ ಬೆಳೆಗಾರರು ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರೀ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಮಾಳವಿಕ ಸೇರಿದಂತೆ ಕಂಪೆನಿಯ 8 ಮಂದಿಯ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಶನಿವಾರ ಮಾಳವಿಕ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದು, ಇದರಿಂದ ಬಂಧನ ಭೀತಿಯಲ್ಲಿದ್ದ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಘಟನೆ ವಿವರ: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ನಂದೀಶ್ ಎಂಬವರು ಎಬಿಸಿ ಕಂಪೆನಿಗೆ ತಮ್ಮ ಕಾಫಿಯನ್ನು ಮಾರಾಟ ಮಾಡಿದ್ದರು. ಕಾಫಿ ಮಾರಾಟ ಮಾಡಿದ್ದ ಸುಮಾರು 45 ಲಕ್ಷ ರೂ. ಪೈಕಿ 4 ಲಕ್ಷ ರೂ. ಹಣವನ್ನು ಕಂಪೆನಿ ನಂದೀಶ್‍ಗೆ ನೀಡಿತ್ತು. ಬಾಕಿ ಹಣಕ್ಕೆ ಕಂಪೆನಿಯು ಚೆಕ್‍ಗಳನ್ನು ನೀಡಿದ್ದು, ಈ ಚೆಕ್‍ಗಳು ಬೌನ್ಸ್ ಆಗಿವೆ ಎಂದು ಆರೋಪಿಸಿ ಎಬಿಸಿ ಹಾಗೂ ಕಾಫಿ ಡೇ ಸಂಸ್ಥೆಗಳ ನಿರ್ದೇಶಕಿಯಾಗಿರುವ ಸಿದ್ದಾರ್ಥ ಹೆಗಡೆ ಪತ್ನಿ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮಗಳಾಗಿರುವ ಮಾಳವಿಕ ಸೇರಿದಂತೆ ಸಂಸ್ಥೆಯ 8 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆಎಂಎಫ್‍ಸಿ ನ್ಯಾಯಾಲಯ ಸಿದ್ದಾರ್ಥ ಹೆಗಡೆ ಪತ್ನಿ ಹಾಗೂ ಸದ್ಯ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪೆನಿಯ ಸಿಇಒ ಆಗಿರುವ ಮಾಳವಿಕ, ನಿರ್ದೇಶಕ ಜಯರಾಜ್ ಸಿ.ಹುಬ್ಳಿ, ಸೆಕ್ರೆಟರಿ ಸದಾನಂದ ಪೂಜಾರಿ ಹಾಗೂ ಕಂಪೆನಿ ಮುಖ್ಯಸ್ಥರಾದ ನಿತಿನ್ ಬಾಗಮನೆ, ಕಿಟೀಟಿ ಸಾವಂತ್, ಜಾವಿದ್ ಫರ್ವೇಜ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು.