ಮಸ್ಕಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ
ಬೆಂಗಳೂರು, ನ.7: ಮೈತ್ರಿ ಸರಕಾರದ ಪತನಕ್ಕೆ ಕಾರಣಕರ್ತ ಶಾಸಕರ ಪೈಕಿ ಒಬ್ಬರಾಗಿದ್ದ ಪ್ರತಾಪ್‍ಗೌಡ ಪಾಟೀಲ್ ಅನರ್ಹತೆಯಿಂದ ತೆರವಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಇನ್ನೂ ಉಪ ಚುನಾವಣೆ ಘೋಷಿಸಿಲ್ಲ. ಆದರೂ, ವಿಪಕ್ಷ ಕಾಂಗ್ರೆಸ್ ಈಗಿನಿಂದಲೆ ಸಿದ್ಧತೆಗಳನ್ನು ಆರಂಭಿಸಿದೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಮುಖಂಡ ಬಸನಗೌಡ ತುರುವೀಹಾಳ್‍ರನ್ನು ಸೆಳೆಯಲು ಕಸರತ್ತು ನಡೆಸಿದ್ದು, ಈ ಸಂಬಂಧ ರಾಯಚೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗವು ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಇಂದು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್‍ಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ಬಿಜೆಪಿ ಮುಖಂಡನಿಗೆ ಬಲೆ ಬೀಸಿದೆ. ಸಿದ್ದರಾಮಯ್ಯ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ರಾಯಚೂರು ಜಿಲ್ಲೆಯ ಮುಖಂಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಯಚೂರು ಜಿಲ್ಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ.ನಾಯಕ್, ಬಸನಗೌಡ ತುರುವೀಹಾಳ್ ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಸಂಬಂಧ ಚರ್ಚೆ ಆಗುತ್ತಿದೆ. ಉಪಚುನಾವಣೆ ಆಗಿರುವುದರಿಂದ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಸೇರ್ಪಡೆ ಸಂಬಂಧ ತುರುವೀಹಾಳ್ ಬಳಿ ನೇರವಾಗಿ ನಾವು ಮಾತನಾಡಿಲ್ಲ. ಕಾಂಗ್ರೆಸ್ ಸೇರ್ಪಡೆ ಕುರಿತು ಅವರ ಕಾರ್ಯಕರ್ತರ ಬಳಿ ತುರುವೀಹಾಳ್ ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಯಲ್ಲಿದ್ದಾರೆ. ಅವರು ಬೆಂಗಳೂರಿಗೆ ಹಿಂದಿರುಗಿದ ಬಳಿಕ ಅವರನ್ನು ಭೇಟಿ ಮಾಡುತ್ತೇವೆ. ನಮ್ಮ ಕುಟುಂಬದ ಯಾವ ಸದಸ್ಯರು ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಜಿಲ್ಲಾ ಮುಖಂಡರ ಅಭಿಪ್ರಾಯ ಪಡೆದು ನಂತರ ಚರ್ಚೆ ಮಾಡುತ್ತೇವೆ ಎಂದು ಬಿ.ವಿ.ನಾಯಕ್ ಹೇಳಿದರು.
ಶಾಸಕ ಡಿ.ಎಸ್.ಹುಲಗೇರಿ ಮಾತನಾಡಿ, ರಾಜ್ಯ ಸರಕಾರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಶಾಸಕರಿಗೆ ಸರಿಯಾದ ಅನುದಾನವನ್ನು ಕೊಡುತ್ತಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇವೆ. ರಾಜ್ಯ ಸರಕಾರದ ಮಲತಾಯಿ ಧೋರಣೆ ಕುರಿತು ಅವರ ಗಮನ ಸೆಳೆದಿದ್ದೇವೆ ಎಂದರು.
ಬಿಜೆಪಿ ಮುಖಂಡ ಬಸನಗೌಡ ತುರುವೀಹಾಳ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಇವತ್ತು ಯಾವುದೆ ಚರ್ಚೆಯಾಗಿಲ್ಲ. ನಮ್ಮ ಜಿಲ್ಲೆಯ ಮುಖಂಡರು ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಶಾಸಕರಾದ ಬಸನಗೌಡ ದದ್ದಲ್, ಅಮರೇಗೌಡ ಬಯ್ಯಾಪೂರ, ವಿಧಾನಪರಿಷತ್ ಮಾಜಿ ಸದಸ್ಯ ಬೋಸರಾಜು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.