ಸರಕಾರಿ ಇಲಾಖೆಗಳಿಂದ 40.76 ಕೋಟಿ ರೂ. ನೀರಿನ ಬಿಲ್ ಬಾಕಿ !

Update: 2020-11-07 14:32 GMT

ಬೆಂಗಳೂರು, ನ.7: ನಗರದ ಹಲವು ಸರಕಾರಿ ಇಲಾಖೆಗಳು ಸುಮಾರು 40.76 ಕೋಟಿ ರೂ.ಗಳಷ್ಟು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಪರಿಣಾಮ ಜಲಮಂಡಳಿ ಬೊಕ್ಕಸಕ್ಕೆ ತೀವ್ರ ಹೊರೆ ಎದುರಾಗಿದೆ.

ಜಲಮಂಡಳಿಯ ಪ್ರಮುಖ ಆದಾಯ ಮೂಲ ನೀರಿನ ಬಿಲ್. ಕೋಟ್ಯಂತರ ರೂಪಾಯಿ ವ್ಯಯಿಸಿ ಜಲಮಂಡಳಿ ನಿತ್ಯ ರಾಜಧಾನಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಗ್ರಾಹಕರು ನೀರಿನ ಬಿಲ್ ಪಾವತಿಸದಿರುವುದು ಜಲಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ, ಸರಕಾರಿ ಇಲಾಖೆಗಳೇ ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಲಮಂಡಳಿ ಸಾಕಷ್ಟು ಪ್ರಯತ್ನ ಮಾಡುತ್ತದೆ. ದೂರದ ಕಾವೇರಿ ನದಿಯಿಂದ ನೀರನ್ನು ರಾಜಧಾನಿಗೆ ತರುವುದಕ್ಕಾಗಿ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡುತ್ತದೆ. ತಾನು ಪೂರೈಸುವ ನೀರಿಗೆ ಗ್ರಾಹಕರಿಂದ ಪಡೆಯುವ ನೀರಿನ ಬಿಲ್ ಜಲಮಂಡಳಿಯ ಆದಾಯದ ಮೂಲವಾಗಿದೆ. ಹಲವು ವರ್ಷಗಳಿಂದ ಇಲಾಖೆಗಳು ನೀರಿನ ಬಿಲ್ ಪಾವತಿಸದ ಹಿನ್ನೆಲೆ ಜಲಮಂಡಳಿ ಬಡ್ಡಿಯನ್ನೂ ವಿಧಿಸುತ್ತಿದೆ. ಜಲಮಂಡಳಿ ಭಾರೀ ಪ್ರಮಾಣದಲ್ಲಿ ನಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಾಕಿ ಬಿಲ್‍ಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಮಂಡಳಿ ಬಿಲ್ ಬಾಕಿ ಉಳಿಸಿರುವ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುತ್ತಿದೆ. ಆದರೆ, ಸರ್ಕಾರಿ ಇಲಾಖೆಗಳ ಬಾಕಿ ನೀರಿನ ಬಿಲ್ ಮಾತ್ರ ವರ್ಷ ಪ್ರತಿ ಏರುತ್ತಲೇ ಇದೆ.

ಜಲಮಂಡಳಿ ವಾರ್ಷಿಕ ಸುಮಾರು 130 ಕೋಟಿ ಆದಾಯ ಕೊರತೆ ಎದುರಿಸುತ್ತಿದೆ. ಸುಮಾರು 500 ಕೋಟಿ ರೂಪಾಯಿ ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತದೆ. ತನ್ನ ಪ್ರಮುಖ ಆದಾಯ ಸಂಗ್ರಹದಲ್ಲಿ ಸುಮಾರು ಶೇ.80 ನೀರಿನ ಬಿಲ್ ಸಂಗ್ರಹದ ಮೂಲಕ ಬರುತ್ತದೆ. ಪರಿಸ್ಥಿತಿ ಹೀಗಿದ್ದಾಗ ಸರಕಾರಿ ಇಲಾಖೆಗಳೇ ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯಾವ ಇಲಾಖೆಗಳು ಎಷ್ಟೆಷ್ಟು: ರಾಜ್ಯ ಸರಕಾರದ ಇಲಾಖೆಗಳು 23.25 ಕೋಟಿ ರೂ., ಕೇಂದ್ರ ಸರಕಾರದ ಇಲಾಖೆಗಳು 7.81 ಕೋಟಿ, ಬಿಬಿಎಂಪಿ 6.10 ಕೋಟಿ, ನಿಗಮ ಮಂಡಳಿಗಳು 2.70 ಕೋಟಿ, ರಕ್ಷಣಾ ಇಲಾಖೆ 90 ಲಕ್ಷ ಸೇರಿದಂತೆ 40.76 ಕೋಟಿ ಬಾಕಿಯಿದೆ.

ಬಾಕಿ ಇರುವ ಬಡ್ಡಿ: ರಾಜ್ಯ ಸರಕಾರದ ಇಲಾಖೆಗಳು 8.50 ಕೋಟಿ, ಕೇಂದ್ರ ಸರಕಾರದ ಇಲಾಖೆಗಳು 1.01 ಕೋಟಿ, ಬಿಬಿಎಂಪಿ 9.17 ಕೋಟಿ, ನಿಗಮ ಮಂಡಳಿಗಳಿಂದ 2.14 ಕೋಟಿ ಬಾಕಿಯಿರುವ ಬಡ್ಡಿ ವಸೂಲಿಯಾಗಬೇಕಿದೆ ಎಂದು ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News