ಪ್ರಶಸ್ತಿ ಹಣ ಸಮಾಜ ಕಾರ್ಯಕ್ಕೆ ದೇಣಿಗೆ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ರಾಮಪ್ಪ

Update: 2020-11-07 15:20 GMT
ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ನ.7: ರೈತರಿಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಅವರು ತಮಗೆ ಬಂದ ಪ್ರಶಸ್ತಿ ಹಣವನ್ನು ಮರು ಸಾಮಾಜಿಕ ಕಾರ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಿಎಂ ಪರಿಹಾರ ನಿಧಿಗೆ 50 ಸಾವಿರ ರೂ. ಹಾಗೂ ದೇಗುಲ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ರೂ. ಕೊಟ್ಟ ಬಳಿಕ ಮಾತನಾಡಿದ ಅವರು, ಸುಮಾರು 50 ವರ್ಷಗಳಿಂದ ರೈತರ ಸೇವೆ ಮಾಡುತ್ತಿದ್ದೇನೆ. ತೊಗರಿ ಮಂಡಳಿ ಸ್ಥಾಪನೆಗೆ ಹೋರಾಟ ಮಾಡಿದ್ದೇನೆ. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತ ಪರ ಹೋರಾಟ ಮಾಡುತ್ತಿದ್ದಾಗ, ಗೋಲಿಬಾರ್ ನಡೆಯಿತು. ಆ ವೇಳೆ ಜೈಲಿಗೂ ಹೋಗಿ ಬಂದಿದ್ದೇನೆ. ನನ್ನ ಸೇವೆ ಗುರುತಿಸಿ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುವುದು ನನಗೆ ಸಂತಸ ತಂದಿದೆ ಎಂದರು.

ಅತಿವೃಷ್ಟಿಯಿಂದಾಗಿ ತೊಂದರೆಯಲ್ಲಿ ಸಿಲುಕಿರುವ ರೈತರಿಗೆ ಪರಿಹಾರ ಸಿಗಬೇಕಿದೆ. ಹಾಗಾಗಿ, ನನಗೆ ಲಭಿಸಿದ ಒಂದು ಲಕ್ಷದ ಪ್ರಶಸ್ತಿ ಹಣದಲ್ಲಿ 50 ಸಾವಿರ ರೂ.ಗಳನ್ನು ರೈತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದು ಸಂತೋಷವಾಗುತ್ತಿದೆ. ಅದೇ ರೀತಿ ಇನ್ನುಳಿದ 50 ಸಾವಿರ ರೂ.ಗಳನ್ನು ನನ್ನ ಹುಟ್ಟೂರು ಧಂಗಾಪೂರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಕಟ್ಟಡಕ್ಕೆ ನೀಡಲು ನಿರ್ಧರಿಸಿದ್ದೇನೆ. ಜೊತೆಗೆ ನನ್ನ ವೈಯಕ್ತಿಕವಾಗಿ 50 ಸಾವಿರ ರೂ.ಗಳನ್ನು ಮಠ-ಮಂದಿರಕ್ಕೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

ನನಗೀಗ 74 ವರ್ಷ ವಯಸ್ಸು, ಇನ್ನೂ ರೈತರ ಸೇವೆ ಮಾಡುವಂತೆ ಪ್ರೇರೇಪಿಸಲು ರಾಜ್ಯ ಸರಕಾರ ಈ ಪ್ರಶಸ್ತಿ ನೀಡಿದೆ. ಸಿಎಂ ಯಡಿಯೂರಪ್ಪರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News