ಸರಕಾರದ ಆರ್ಥಿಕ ಹೊರೆ ನಿಭಾಯಿಸಲು ವಿದ್ಯುತ್ ದರ ಏರಿಕೆ: ಸಚಿವ ಡಾ.ಕೆ.ಸುಧಾಕರ್

Update: 2020-11-07 15:56 GMT

ಚಿಕ್ಕಮಗಳೂರು, ನ.7: ಸರಕಾರ ಎಂದರೆ ಅಕ್ಷಯ ಪಾತ್ರೆಯಲ್ಲ. ಕೋವಿಡ್‍ನಿಂದಾಗಿ ಸರಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸರಕಾರಕ್ಕೆ ತನ್ನದೇಯಾದ ಆರ್ಥಿಕ ಇತಿಮಿತಿಗಳಿವೆ. ಆರ್ಥಿಕ ಹೊರೆ ನಿಭಾಯಿಸಲು ವಿದ್ಯುತ್ ದರ ಏರಿಕೆ ಮಾಡಿದೆ. ಜನತೆ ಇದಕ್ಕೆ ಸಹಕಾರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಟಿಯಾಗಿದ್ದು, ಇದರಿಂದ ಸಾವಿರಾರು ಕೋ.ರೂ. ಸರಕಾರಕ್ಕೆ ನಷ್ಟವಾಗಿದೆ. ಇದನ್ನು ನಿರ್ವಹಿಸಲು ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿದೆ. ಕೋವಿಡ್‍ನಿಂದಾಗಿ ಕಳೆದ 8 ತಿಂಗಳಲ್ಲಿ ಸರಕಾರ 6 ಕೋಟಿ ಜನರಿಗೆ ವಿವಿಧ ರೀತಿಯಲ್ಲಿ ಕೋವಿಡ್ ನಿರ್ವಹಣೆಗೆ ಸಾವಿರಾರು ಕೋ. ರೂ. ಖರ್ಚು ಮಾಡಿದೆ. ಸರಕಾರಿ ಅಧಿಕಾರಿ, ಸಿಬ್ಬಂದಿಗೆ ವೇತನ ಕಡಿತ ಮಾಡದೇ ಲಭ್ಯವಿದ್ದ ಅನುದಾನದಲ್ಲೇ ಅಭಿವೃದ್ಧಿ ಕೆಲಸಗಳನ್ನೂ ಸರಕಾರ ಮಾಡುತ್ತಿದೆ ಎಂದರು.

ಲಾಕ್‍ಡೌನ್‍ನಿಂದಾಗಿ ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳು ನಿಂತಿದ್ದರಿಂದ ಸರಕಾರ ಆದಾಯ ಕ್ರೋಢೀಕರಣಕ್ಕೆ ಕಷ್ಟವಾಗಿದೆ. ಆದಾಯದ ಕೊರತೆಯಿಂದಾಗಿ ಸರಕಾರ ಆರ್ಥಿಕ ವಿಚಾರದಲ್ಲಿ ಭಾರೀ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಕೊರೋನ ಸೋಂಕು ರಾಜ್ಯದ ಆರ್ಥಿಕತೆಗೆ ಬರಸಿಡಿಲಿನಂತೆ ಬಡಿದಿದ್ದು, ಆದಾಯ ಕ್ರೋಡೀಕರಣಕ್ಕೆ ಸರಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಬೆಲೆ ಏರಿಕೆಯನ್ನು ರಾಜ್ಯ ಸರಕಾರ ಖುಷಿಯಿಂದ ಮಾಡಿದ್ದಲ್ಲ, ಅನಿವಾರ್ಯ ಕಾರಣಕ್ಕೆ ಮಾಡಿದೆ. ಜನರು ಇದಕ್ಕೆ ಸಹಕಾರ ನೀಡಬೇಕೆಂದ ಅವರು, ವಿರೋಧ ಪಕ್ಷಗಳು ವಿದ್ಯುತ್ ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಈ ಬಗ್ಗೆ ಚರ್ಚಿಸಿ ಕ್ರಮವಹಿಸಲಿದ್ದಾರೆ ಎಂದರು.

ಪಟಾಕಿ ನಿಷೇದವನ್ನು ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಾಡಿಲ್ಲ, ದೇಶದ ಇತರ ರಾಜ್ಯಗಳಲ್ಲೂ ಪಟಾಕಿ ನಿಷೇದ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇದ ಮಾಡಿರುವುದರಿಂದ ವ್ಯಾಪಾರಿಗಳಿಗೆ, ಪಟಾಕಿ ತಯಾರಿಕಾ ಕಂಪೆನಿಗಳಿಗೆ ನಷ್ಟವಾಗಲಿದೆ ಎಂಬುದು ಸರಿಯಲ್ಲ. ಕೊರೋನ ಸಂಕಷ್ಟದ ಕಾಲದಲ್ಲಿ ಎಲ್ಲದಕ್ಕೂ ನಿರ್ಬಂಧ ಇತ್ತು. ಈ ಅವಧಿಯಲ್ಲಿ ಪಟಾಕಿ ಉತ್ಪಾದನೆ ಮಾಡಿದ್ದಾದರೂ ಏಕೆಂದು ಪ್ರಶ್ನಿಸಿದ ಅವರು, ಜನರ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಪಟಾಕಿ ನಿಷೇದ ಮಾಡಲಾಗಿದೆ. ಪರಿಸರ ಸ್ನೇಹಿ ಪಟಾಕಿಗಳೊಂದಿಗೆ ಹಬ್ಬ ಆಚರಣೆಗೆ ಸರಕಾರ ಅವಕಾಶ ನೀಡಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದು, ಮತಾಂತರ ನಿಷೇಧ ಕಾನೂನು ಜಾರಿಗೆ ತರಲಿ ಎಂದು ಇತ್ತೀಚೆಗೆ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೆ ತರಲೇಬೇಕು, ತಂದೇ ತರುತ್ತೇವೆ. ಕಾನೂನು ಜಾರಿ ಸಂಬಂಧ ಈಗಾಗಲೇ ಎಲ್ಲ ಹಂತದಲ್ಲೂ ಚರ್ಚೆಯಾಗಿದೆ. ಇದನ್ನು ಯು.ಟಿ.ಖಾದರ್ ಬಳಿ ಹೇಳಿಸಿಕೊಂಡು ಜಾರಿ ಮಾಡಬೇಕಾದ ಆವಶ್ಯಕತೆ ಸರಕಾರಕ್ಕಿಲ್ಲ. ಕಾನೂನು ಜಾರಿ ಸಂಬಂದ ವಿವಿಧ ಹಂತದ ಚರ್ಚೆಗಳು ಸರಕಾರದ ಮಟ್ಟದಲ್ಲಿ ನಡೆದಿದ್ದು, ಮುಂದಿನ ಆಧಿವೇಶನದಲ್ಲಿ ಕಾನೂನು ಜಾರಿ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News