ಲವ್ ಜಿಹಾದ್ ಎಂಬ ಪರಿಕಲ್ಪನೆಯೇ ಇಸ್ಲಾಮಿಗೆ ಅನ್ಯ: ಶಾಫಿ ‌ಸ‌ಅದಿ

Update: 2020-11-07 16:06 GMT

ಚಿತ್ರದುರ್ಗ: ಇಸ್ಲಾಮ್ ಧರ್ಮವು ಶಾಂತಿಯುತ ಸಮಾಜದ ಸ್ಥಾಪನೆಯನ್ನು ಬಯಸುತ್ತದೆ. ಬಲವಂತದ ಮತಾಂತರ, ಹಿಂಸೆ -ದೊಂಬಿಗಳಿಗೆ ಇಸ್ಲಾಮ್ ಎಂದೂ ಪ್ರೋತ್ಸಾಹ ಕೊಟ್ಟಿಲ್ಲ. ಲವ್ ಜಿಹಾದ್ ಎಂಬ ಪರಿಕಲ್ಪನೆಯೇ ಇಸ್ಲಾಮಿಗೆ ಅನ್ಯವಾಗಿದ್ದು, ಅದು ಕಪೋಲಕಲ್ಪಿತವಾಗಿದೆ‌ ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಜಮಾಅತ್ ಪ್ರ‌.ಕಾರ್ಯದರ್ಶಿ, ಕರ್ನಾಟಕ‌ ಇಹ್ಸಾನ್ ಚೆಯರ್‌ಮೇನ್ ಹಾಗೂ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ.ಶಾಫಿ ಸ‌ಅದಿ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದುರ್ಗದಲ್ಲಿ ಸೀಬಾರ್ ಇಹ್ಸಾನ್ ಸೆಂಟರ್ ಹಾಗೂ ಕೆಸಿಎಫ್ ಜಂಟಿಯಾಗಿ ಆಯೋಜಿಸಿದ್ದ ಜಶ್ನೇ ಮೀಲಾದ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಹಾದ್ ಕುರಿತ ಪವಿತ್ರ ಖುರ್‌ಆನಿನ ವಿಶ್ಲೇಷಣೆಗಳನ್ನು ತಪ್ಪಾಗಿ ಅರ್ಥೈಸಿರುವ ಕೆಲವರು ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ತಳುಕು ಹಾಕುತ್ತಿದ್ದಾರೆ. ಅನ್ಯಾಯ-ಅಕ್ರಮಗಳ ವಿರುದ್ಧದ ನ್ಯಾಯಬದ್ಧ ಹೋರಾಟಗಳೆಲ್ಲವೂ ಜಿಹಾದ್ ಆಗಿದೆ. ಇಸ್ಲಾಮ್ ಹಾಗೂ ಜಿಹಾದ್ ಅಪಾರ್ಥಕ್ಕೊಳಗಾಗಬಾರದು. ಬಲವಂತದ ಮತಾಂತರದಿಂದ ಮುಸ್ಲಿಮ್ ಆಗಲು ಸಾಧ್ಯವಿಲ್ಲ. ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ನಿಷಿದ್ಧವಾಗಿರುವ ಪ್ರೇಮ ಪ್ರಕರಣಗಳನ್ನು ಜಿಹಾದ್ ಎಂಬ ಹೆಸರಿನೊಂದಿಗೆ ಪ್ರಚಾರ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದ ಅವರು, ಯಾವುದೇ ಧರ್ಮದ ಘೋಷಣೆಗಳನ್ನು ಹೇಳಲು ಬಲವಂತಡಿಸುವವರು ಅಜ್ಞಾನಿಗಳಾಗಿದ್ದಾರೆ. ಆದುದರಿಂದಲೇ ಭಯೋತ್ಪಾದನೆ ಹಾಗೂ ಪ್ರೇಮಪ್ರಕರಣಗಳಿಗೂ ಇಸ್ಲಾಮಿಗೂ ಯಾವುದೇ ಸಂಬಂಧ ಇಲ್ಲ ಎಂಬುವುದು ಸ್ಪಷ್ಟವಾಗಿದೆ ಎಂದರು.

ಈ ಮಧ್ಯೆ ಫ್ರಾನ್ಸ್ ಅಧ್ಯಕ್ಷರು ಪ್ರವಾದಿಯವರ ವ್ಯಂಗ್ಯಚಿತ್ರದ ಬಗ್ಗೆ ಮಂಡಿಸಿರುವ ವಾದವು ಅತಿದೊಡ್ಡ ವ್ಯಂಗ್ಯವಾಗಿದೆ ಎಂದು ಶಾಫಿ ‌ಸ‌ಅದಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಸಅದಿಯ ಬುರ್ದಾ ತಂಡದಿಂದ ಬುರ್ದಾ ಹಾಗೂ ಮಿಅರಾಜುದ್ದೀನ್ ಖಾದಿರಿ ಅಸ್ಅದಿ ಶಿವಮೊಗ್ಗ ನಆತೆ ಶರೀಫ್ ಆಲಾಪಿಸಿದರು. ಸಂಸ್ಥೆಯ  ಮುಖ್ಯಸ್ಥ ಗುಲಾಮ್ ರಸೂಲ್ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಮೌಲಾನಾ ಶಬ್ಬೀರ್ ಅಲಿ ರಝ್ವಿ  ಸಾಹೇಬ್ ಬೆಂಗಳೂರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಅನ್ವರ್ ಭಾಷಾ, ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸೈಫುಲ್ಲಾ ಸಾಬ್ ದಾವಣಗೆರೆ, ಇಹ್ಸಾನ್ ನಾಯಕರಾದ ಇಸ್ಮಾಯಿಲ್ ಸಅದಿ ಕಿನ್ಯ, ಇಸ್ಹಾಕ್ ಝುಹ್ರಿ ಸೂರಿಂಜೆ, ಇಬ್ರಾಹಿಂ ಸಖಾಫಿ, ಹಬೀಬ್ ನಾಳ, ಚಿತ್ರದುರ್ಗದ ನಾಯಕರುಗಳಾದ ಶಬೀರ್ ಸಾಹೇಬ್, ಅಡ್ವಕೇಟ್ ಸಾಧಿಕುಲ್ಲಾ, ಅಡ್ವಕೇಟ್ ಝುಲ್ಫಿಕಾರ್, ಮುಹ್ಸಿನ್ ಸಾಹೇಬ್, ವಜ್ಹೀರ್ ಸಾಹೇಬ್, ತಾಜ್ಪೀರ್ ಫೀರ್ ಸಾಬ್ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು,  ಇಹ್ಸಾನ್ ದಾಇಗಳು, ಚಿತ್ರದುರ್ಗ ಎಸ್ಸೆಸ್ಸೆಫ್ ನಾಯಕರು ಉಪಸ್ಥಿತರಿದ್ದರು.

ಇಹ್ಸಾನ್ ಕನ್ವೀನರ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿ, ಅಡ್ವಕೇಟ್ ಝುಲ್ಫಿಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News