ಅಕ್ರಮ ಆಸ್ತಿ ಹೊಂದಿರುವ ಕುರಿತು ಮಾಹಿತಿ ಬಂದ ಹಿನ್ನೆಲೆ ದಾಳಿ: ಐಜಿಪಿ ಚಂದ್ರಶೇಖರ್

Update: 2020-11-07 16:12 GMT

ಬೆಂಗಳೂರು, ನ.7: ಕೆಎಎಸ್ ಅಧಿಕಾರಿ ಡಾ.ಸುಧಾ ಅವರು ಅಕ್ರಮ ಆಸ್ತಿ ಹೊಂದಿರುವ ಕುರಿತು ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಐಜಿಪಿ ಚಂದ್ರಶೇಖರ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಉಡುಪಿ, ಮೈಸೂರು ಸೇರಿದಂತೆ ಆರು ಕಡೆ ದಾಳಿ ನಡೆಸಿದ್ದೇವೆ. ಸುಧಾ ಅವರ ಮೇಲೆ ಮಾತ್ರ ಈಗ ದೂರು ದಾಖಲಿಸಿದ್ದೇವೆ ಎಂದರು.

ಪ್ರಾಥಮಿಕ ಮಾಹಿತಿ ಪ್ರಕಾರ ಬೇನಾಮಿ ಆಸ್ತಿಯೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಲಿದ್ದೇವೆ. ಆ ರೀತಿಯಾಗಿ ಬೇನಾಮಿಗಳು ಯಾರಾದರೂ ಇದ್ದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.

ಈಗ ಪರಿಶೀಲನೆ ನಡೆಯುತ್ತಿದ್ದು, ತನಿಖಾ ಹಂತದಲ್ಲಿರುವ ಕಾರಣ ಹೆಚ್ಚೇನೂ ಹೇಳಲು ಆಗುವುದಿಲ್ಲ ಎಂದ ಅವರು, ಸುಧಾ ಅವರಿಗೆ ಸೇರಿದ ಒಂದು ಫ್ಯಾಟ್ ಬಗ್ಗೆ ಇನ್ನೂ ತನಿಖೆ ಮಾಡಿಲ್ಲ. ತಡರಾತ್ರಿವರೆಗೂ ತನಿಖೆ ಮಾಡುವುದಕ್ಕೆ ಚಿಂತನೆ ಮಾಡಿದ್ದೇವೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಬಿಡಿಎನಲ್ಲಿ ವಿಶೇಷ ಸ್ವಾಧೀನಾಕಾರಿಯಾಗಿದ್ದ ಡಾ. ಬಿ.ಸುಧಾ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರ ಆರೋಪ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು, ಪರಿಶೀಲನೆ ವೇಳೆ ಮನೆಯಲ್ಲಿ 10 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News