ಮಂಡ್ಯ ಜಿ.ಪಂ.ನಲ್ಲಿ ಹೈಡ್ರಾಮ: ಪ್ರಭಾರ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಪೀಠ ಅಲಂಕಾರ

Update: 2020-11-07 16:24 GMT

ಮಂಡ್ಯ, ನ.7: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ಹಾಗೂ ಜೆಡಿಎಸ್ ಸದಸ್ಯರ ನಡುವಿನ ಸಮರ ತಾರಕ್ಕೇರಿದೆ. ಶನಿವಾರ ನಡೆದ ಹೈಡ್ರಾಮದಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್, ಜಿಪಂ ಪ್ರಭಾರ ಅಧ್ಯಕ್ಷರಾಗಿ ಅಧ್ಯಕ್ಷರ ಪೀಠವನ್ನು ಅಲಂಕರಿಸಿದ್ದಾರೆ.

ಅಶೋಕ್ ಅವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಧ್ಯಕ್ಷೆ ನಾಗರತ್ನ ಸ್ವಾಮಿ, ಅಶೋಕ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್ ಅವರಿಗೆ ದೂರು ನೀಡಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ನಿಯಮಕ್ಕೆ 177 ತಿದ್ದುಪಡಿಯಂತೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಅವಧಿಯನ್ನು 5 ವರ್ಷದಿಂದ 30 ತಿಂಗಳಿಗೆ ಮಿತಿಗೊಳಿಸಿ ಆದೇಶಿಸಿದೆ. ಇದರ ಅನ್ವಯ ಪ್ರಭಾರ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿದ್ದೇನೆ ಎಂದು ಅಶೋಕ್‌ ಹೇಳಿದರು.

ಅಶೋಕ್‌ ಅವರು ಅಧ್ಯಕ್ಷರ ಕೊಠಡಿ ಅತಿಕ್ರಮ ಪ್ರವೇಶ ಮಾಡಿ ಪೀಠವನ್ನು ಅಲಂಕರಿಸಿ ಅಧ್ಯಕ್ಷರ ಪೀಠಕ್ಕೆ ಅಪಮಾನ ಮಾಡಿದ್ದು, ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷೆ ನಾಗರತ್ನ ಎಸ್ಪಿಗೆ ದೂರು ನೀಡಿದ್ದಾರೆ.

ಅಶೋಕ್‌ ಅವರು ನೀಡಿದ ಮನವಿ ಪತ್ರದ ಬಗ್ಗೆ ಪರಿಶೀಲಿಸಲು ಜಿಪಂ ಸಿಇಒ ಅವರಿಗೆ ಬರೆಯಲಾಗಿದೆಯೇ ಹೊರತು ಅಶೋಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ತನ್ನ ಕಚೇರಿಯಿಂದ ಯಾವುದೇ ಆದೇಶ ನೀಡಿಲ್ಲ. ಅಶೋಕ್ ಅವರು ಸಿಇಒಗೆ ಬರೆದಿರುವ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಜಿಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಸ್ವಾಮಿ, ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ನಾಗರತ್ನ ಅವರು ಅಧ್ಯಕ್ಷ ಸ್ಥಾನಕ್ಕಾಗಿ ರಾಜೀನಾಮೆ ನೀಡುವಂತೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದ್ದು, ನಾಗರತ್ನ ಅವರು ನಿರಾಕರಿಸಿದ್ದಾರೆ. ಹಾಗಾಗಿ ಅಧ್ಯಕ್ಷೆ ನಾಗರತ್ನ ಮತ್ತು ಜೆಡಿಎಸ್ ಸದಸ್ಯರ ನಡುವೆ ಸಮರ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News