'ವಿದ್ಯುತ್ ದರ ಏರಿಕೆ' ಜನರ ಸುಲಿಗೆಗೆ ಪರವಾನಿಗೆ: ಎಸ್‍ಯುಸಿಐ

Update: 2020-11-07 16:26 GMT

ಬೆಂಗಳೂರು, ನ. 7: ಕೊರೋನ ಸೋಂಕಿನ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಯೂನಿಟ್‍ಗೆ ಸರಿಸುಮಾರು 40 ಪೈಸೆಯಷ್ಟು ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಿರುವುದು ಅಪ್ಪಟ ಜನವಿರೋಧಿ ಕ್ರಮ. ಮಾತ್ರವಲ್ಲ ಇದು ಜನ ಸಾಮಾನ್ಯರ ಸುಲಿಗೆಗೆ ಪರವಾನಿಗೆ ನೀಡಿದಂತೆ ಎಂದು ಎಸ್‍ಯುಸಿಐ ಆಕ್ರೋಶ ವ್ಯಕ್ತಪಡಿಸಿದೆ.

ವಿದ್ಯುತ್ ಪೂರೈಕೆ ಕಂಪೆನಿಗಳು ಪ್ರತಿ ಯೂನಿಟ್‍ಗೆ 1.25 ರೂ. ರಷ್ಟು ಹೆಚ್ಚಿಸಲು ಪರವಾನಿಗೆ ಕೇಳಿದ್ದವು. ಆದರೆ, ಕೆಆರ್‍ಇಸಿ ಕೇವಲ 20ರಿಂದ 40 ಪೈಸೆಯಷ್ಟು ಮಾತ್ರ ಹೆಚ್ಚಿಸಲು ಪರವಾನಿಗೆ ನೀಡಿ ಜನಪರ ಧೋರಣೆಯನ್ನು ಪ್ರತಿಬಿಂಬಿಸಿದೆಯೇನೋ ಎಂಬಂತೆ ಬಣ್ಣಿಸಿಕೊಂಡಿದೆ. ಎಲ್ಲ ಬಳಕೆದಾರರ ವಿದ್ಯುತ್ ಶುಲ್ಕವನ್ನು ನಿಷ್ಠುರವಾಗಿ ವಸೂಲಿ ಮಾಡಿದ ನಂತರವೂ ಈ ಕಂಪೆನಿಗಳಿಗೆ ದರ ಏರಿಸಬೇಕಾದ ಅನಿವಾರ್ಯತೆ ಉಂಟಾಯಿತೇ ಎಂಬುದನ್ನು ವಿಚಾರಿಸಿ ಅದನ್ನು ಸರಿಪಡಿಸಿಕೊಳ್ಳಲು ತಾಕೀತು ಮಾಡುವುದನ್ನು ಬಿಟ್ಟು ದರ ಏರಿಸಲು ಅನುಮತಿ ನೀಡಿದೆ. ಆದರೆ, ಕಂಪೆನಿಗಳ ಒತ್ತಡಕ್ಕೆ ಮಣಿದಿಲ್ಲ ಎಂಬಂತೆ ಬಿಂಬಿಸಿಕೊಳ್ಳಲು ಈ ವಿವರಣೆಯನ್ನು ನೀಡುತ್ತಿದೆ. ಇದು ವಂಚನೆಯ ಪರಮಾವಧಿಯಾಗಿದೆ ಎಂದು ಟೀಕಿಸಿದೆ.

ಕೆಆರ್‍ಇಸಿಗೆ ನಿಜಕ್ಕೂ ಜನತೆಯ ಹಿತದ ಬಗ್ಗೆ ಕಾಳಜಿಯಿದ್ದರೆ ಸಾರ್ವಜನಿಕವಾಗಿ ಸಾಮಾನ್ಯ ಗ್ರಾಹಕರು ಮತ್ತು ಕಂಪೆನಿಗಳ ಜಂಟಿ ಸಭೆ ನಡೆಸಲಿ. ಕಂಪೆನಿಗಳ ಲೆಕ್ಕ ಸಂಗ್ರಹಿಸಿ ಸಾರ್ವಜನಿಕ ಪರಿಶೋಧನೆಗೆ ಒಪ್ಪಿಸಲಿ. `ನೀನು ಸತ್ತಂಗ ಮಾಡು ನಾನು ಅತ್ತಂಗ ಮಾಡ್ತೀನಿ' ಎಂಬ ಈ ನಾಟಕ ನಿಲ್ಲಿಸಲಿ. ದರ ಏರಿಕೆ ಯೂನಿಟ್‍ವೊಂದಕ್ಕೆ 20ರಿಂದ 40 ಪೈಸೆ ಎಂದು ಹೇಳಲಾದರೂ ವಾಸ್ತವದಲ್ಲಿ ಅಂತಿಮವಾಗಿ ಬಿಲ್ ಕೈಗೆ ಬಂದಾಗ ಏರಿಕೆ 200 ರಿಂದ 500 ರೂ.ಗಳಷ್ಟು ಹೆಚ್ಚುತ್ತದೆ. ಕೊರೋನ ಸಾಂಕ್ರಾಮಿಕದಿಂದ ಜನತೆ ನಲುಗಿ ಹೋಗಿರುವಾಗ, ಇರುವ ಉದ್ಯೋಗವನ್ನು ಕಳೆದುಕೊಡು ಕಂಗಾಲಾಗಿರುವಾಗ ಅವರಿಗೆ ಆಸರೆಯಾಗಬೇಕಾದ ತನ್ನ ಜವಾಬ್ದಾರಿಯನ್ನು ಕೈಬಿಟ್ಟು ಅಮಾನುಷವಾಗಿ ಜನತೆಯನ್ನು ಹಿಂಡಲು ಹೊರಟಿದೆ ಈ ಸರಕಾರ. ಇದು ಅಕ್ಷಮ್ಯ ಎಂದು ಎಸ್‍ಯುಸಿಐ ದೂರಿದೆ.

ಅಲ್ಲದೆ ಎಪ್ರಿಲ್ 1ಕ್ಕೆ ದರ ಪರಿಷ್ಕರಿಸಬೇಕಿತ್ತು. ಆದರೆ ಈ ಬಾರಿ ಕೊರೋನ ಕಾರಣದಿಂದ ಪರಿಷ್ಕರಣೆಯನ್ನು ನವೆಂಬರ್ ಗೆ ಮುಂದೂಡಿ ಕೃಪೆ ತೋರಲಾಗಿದೆ ಎಂಬಂತೆ ಬಣ್ಣಿಸಲಾಗುತ್ತಿದೆ. ಈ ಅಂಶವೂ ಒಂದು ಮೋಸವೇ ಸರಿ. ಯಾತಕ್ಕಾಗಿ ವರ್ಷವೊಂದಕ್ಕೆ ದರ ಹೆಚ್ಚಿಸಬೇಕು? ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಷ್ಕರಣೆ ಮಾಡಬಹುದಲ್ಲವೇ? ಅಂತಹ ಜನಪರ ನಿಲುವು ಇವರಿಗೆ ಇಲ್ಲ. ಬದಲಿಗೆ ದೋಚುವುದು ನಮ್ಮ ಧರ್ಮ ಆದರೆ ಅದನ್ನು ನಾವು ಈ ಬಾರಿ 7 ತಿಂಗಳು ತಡವಾಗಿ ದೋಚುತ್ತಿದ್ದೇವೆ ಅದಕ್ಕಾಗಿ ನೀವು ಕೃತಜ್ಞರಾಗಿರಬೇಕು ಎಂದು ಹೇಳುತ್ತಿದೆ. ಇಂತಹ ವಾದವು ಜನತೆಯನ್ನು ಮರಳು ಮಾಡುವ ಹುನ್ನಾರವಾಗಿದೆ. ನಿರ್ಲಜ್ಜ ಸರ್ಕಾರದ ಈ ಧೂರ್ತತನದ ಬಗ್ಗೆ ಜನತೆ ಜಾಗೃತರಾಗಬೇಕು ಎಂದು ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News