ಮೈಷುಗರ್ ವಿಷಯದಲ್ಲಿ ನಿಮ್ಮಷ್ಟೇ ನೋವು ನನಗೂ ಇದೆ: ಸಂಸದೆ ಸುಮಲತಾ ಅಂಬರೀಷ್
ಮಂಡ್ಯ, ನ.7: ಮೈಷುಗರ್ ಕಂಪನಿಯ ವಿಷಯವು ನನಗೆ ಪ್ರಮುಖವಾದ ಮತ್ತು ಹತ್ತಿರವಾದ ವಿಷಯವಾಗಿದೆ. ಇದರ ಬಗೆಗಿನ ಹೋರಾಟವು ನಿಮಗೆ ಮಾತ್ರವಲ್ಲದೆ ನನಗೂ ಹೋರಾಟವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಸಹಯೋಗದಲ್ಲಿ ರೈತರ ಅಶೋತ್ತರಗಳನ್ನು ಈಡೇರಿಸುವ ಮತ್ತು ಮೈಷುಗರ್ ಕಂಪನಿಯನ್ನು ಓ ಅಂಡ್ ಎಂ ಗೆ ವಹಿಸುವಬೇಕು ಅಥವಾ ಸರಕಾರವೇ ನಡೆಸಬೇಕು ಎನ್ನುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದರ ಬಗೆಗೆ ಸಚಿವರಾದ ನಾರಾಯಣಗೌಡರು, ಶಿವರಾಮ್ ಹೆಬ್ಬಾರರ ಜೊತೆ ಮಾತನಾಡಿದ್ದೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆ ಮಾತನಾಡಿದಾಗ ಚುನಾವಣೆಯ ಫಲಿತಾಂಶದ ನಂತರ ಮೈಷುಗರ್ ಕಂಪನಿಯ ಆರಂಭಿಸುವ ಬಗ್ಗೆ ತಕ್ಕ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ, ಯಾವುದೇ ಕಾರಣಗಳಿದ್ದರು ಬದಿಗೊತ್ತಿ ಮೈಷುಗರ್ ಕಂಪನಿ ಕಾರ್ಯಾರಂಭವಾಗುವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.
ಕಂಪನಿಯ ವಿಷಯದಲ್ಲಿ ನಿಮಗೆ ಎಷ್ಟು ನೋವಿದೆ ಅಷ್ಟೇ ನೋವು ನನಗೂ ಕೂಡ ಇದ್ದು ಇದೊಂದು ಸವಾಲಾಗಿದೆ. ಈ ಸವಾಲಿನ ಫಲಿತಾಂಶವು ಉತ್ತಮವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಮಾತನಾಡಿ, ಜಿಲ್ಲೆಗೆ ಬರಬೇಕಾದ ಅನೇಕ ಸೌಲಭ್ಯಗಳು ಸರಕಾರದಲ್ಲಿ ಬಾಕಿ ಇದೆ. ಆ ಸೌಲಭ್ಯಗಳನ್ನು ಜಿಲ್ಲೆಗೆ ಆದಷ್ಟು ಬೇಗ ತರುವುದಾಗಿ ಹೇಳಿದರು ಮತ್ತು ಜಿಲ್ಲೆಯಲ್ಲಿನ ಕುಂದು ಕೊರತೆಗಳನ್ನು ಗಮನಹರಿಸಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತ ಇದೆ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕಿ ಕುಮುದ ಶರತ್, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್, ಗೌರವ ಅಧ್ಯಕ್ಷರ ಕೀಲಾರ ಕೃಷ್ಣಪ್ಪ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.