ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ: ಸಿದ್ದರಾಮಯ್ಯ

Update: 2020-11-08 15:39 GMT

ಶಿವಮೊಗ್ಗ, ನ.8: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಮೂರ್ನಾಲ್ಕು ತಿಂಗಳ ಹಿಂದೆಯೇ ನಡೆದಿತ್ತು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಲು ಬಿಜೆಪಿಯಲ್ಲಿ ಮೂರ್ನಾಲ್ಕು ತಿಂಗಳ ಹಿಂದೆಯೇ ಚರ್ಚೆ ನಡೆದಿತ್ತು.

ಬಿಜೆಪಿಯಲ್ಲಿ ಎರಡು ಮೂರು ಗುಂಪುಗಳಿವೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ  ಬಿಹಾರದ ಚುನಾವಣೆ ನಂತರ ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಬಿಹಾರ ಚುನಾವಣೆ ಫಲಿತಾಂಶ ನಿರೀಕ್ಷಿತ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟ ಬಂಧನ್ ಅಧಿಕಾರಕ್ಕೇರಲಿದೆ. ಸಮೀಕ್ಷೆಗಿಂತ ಮುಖ್ಯವಾಗಿ ಜನರು ಬದಲಾವಣೆ ಬಯಸಿದ್ದರು. ವಿಶೇಷವಾಗಿ ಯುವ ಜನತೆ ನಿತೀಶ್ ಕುಮಾರ್ ಗೆ ವಿರುದ್ಧವಾಗಿದ್ದರು. ಮೋದಿ ಸರಕಾರದ ಬಗ್ಗೆ ಭ್ರಮನಿರಸನಗೊಂಡಿದ್ದರು. ವಲಸಿಗರ ಸಮಸ್ಯೆ ಬಗ್ಗೆ ಅಲ್ಲಿನ ರಾಜ್ಯ ಸರಕಾರ ಗಮನ ಹರಿಸದಿರುವುದೂ ಮುಖ್ಯ ಕಾರಣ. ಆಡಳಿತ ವಿರೋಧಿ ಅಲೆ ಇತ್ತು. ಹಾಗಾಗಿ ಎನ್ ಡಿಎ ಅಧಿಕಾರ‌ ಕಳೆದುಕೊಳ್ಳಲಿದೆ ಎಂದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಇದು ರಾಜಕೀಯ ಪ್ರೇರಿತ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ವಿಚಾರಣೆ ನಡೆಸಿ ಚಾರ್ಜ್ ಶೀಟ್ ಹಾಕಿದ್ದರು. ಸಿಬಿಐಗೆ ವಹಿಸಿದ ಮೇಲೆ ಮತ್ತೊಮ್ಮೆ ವಿಚಾರಣೆ ಮಾಡಿ ಸಿಲುಕಿಸುವ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಒತ್ತಡದಿಂದ ಈ ಕೆಲಸ ನಡೆದಿದೆ. ಏಕೆಂದರೆ ಕುಲಕರ್ಣಿ ಅವರು ಜೋಶಿ ವಿರುದ್ಧ ಸ್ಪರ್ಧಿಸಿದ್ದರು. ಇದು ಬೆದರಿಕೆ ತಂತ್ರವಾದರೂ ನಾವು ಹೆದರುವುದಿಲ್ಲ ಎಂದು ಹೇಳಿದರು.

ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿರಾ ಮತ್ತು ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಆಪರೇಷನ್ ಕಮಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆಪರೇಷನ್ ಕಮಲದ ಜನಕನೇ ಯಡಿಯೂರಪ್ಪ. ಅದಕ್ಕೂ ಮೊದಲು ಆ ಪದವೇ ಗೊತ್ತಿರಲಿಲ್ಲ. 2008ರಲ್ಲಿ ಅದನ್ನು ಚಾಲ್ತಿಗೆ ತಂದಿದ್ದೇ ಯಡಿಯೂರಪ್ಪ‌ ಎಂದು‌ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News