ಶಿರಾ, ಆರ್.ಆರ್.ನಗರ ಉಪಚುನಾವಣೆ: ಮಂಗಳವಾರ ಮತ ಎಣಿಕೆ, ಆಯೋಗದಿಂದ ಸಕಲ ಸಿದ್ಧತೆ

Update: 2020-11-08 11:38 GMT

ಬೆಂಗಳೂರು, ನ. 8: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪ್ರತಿಷ್ಠೆ, ಪೈಪೋಟಿ ಸೃಷ್ಟಿಸಿರುವ ಮತ್ತು ಮುಂಬರಲಿರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ(ಆರ್.ಆರ್.ನಗರ)ನಗರ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯ ನ.10ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ಶಿರಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಾಗೂ ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆ ಕಾರ್ಯ ಹಲಗೇವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಲಿದೆ. ನ.10ರ ಬೆಳಗ್ಗೆ 8ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಸುಗಮ ಮತ ಎಣಿಕೆ ಕಾರ್ಯಕ್ಕೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇವಿಎಂಗಳ ಮತ ಎಣಿಕೆಯು ತಲಾ 7 ಮೇಜಿನಂತೆ ಎರಡು ಕೊಠಡಿಗಳಲ್ಲಿ ಒಟ್ಟು 14 ಟೇಬಲ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆ 3 ಟೇಬಲ್‍ಗಳಲ್ಲಿ ಹಾಗೂ ಸೇವಾಮತದಾರರ ಮತ ಎಣಿಕೆಯು 1 ಮೇಜು ಸೇರಿ ಒಟ್ಟು ನಾಲ್ಕು ಟೇಬಲ್‍ಗಳಲ್ಲಿ ನಡೆಯಲಿದೆ. ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳ ಉಸ್ತುವಾರಿಯಲ್ಲಿ ಎಣಿಕೆ ಕಾರ್ಯ ಜರುಗಲಿದೆ.

ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಬಿಜೆಪಿಯ ರಾಜೇಶ್‍ ಗೌಡ, ಜೆಡಿಎಸ್‍ನ ಅಮ್ಮಾಜಮ್ಮ, ಇತ್ತ ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕುಸುಮಾ ಎಚ್., ಬಿಜೆಪಿಯ ಮುನಿರತ್ನ ಹಾಗೂ ಜೆಡಿಎಸ್ ನ ವಿ.ಕೃಷ್ಣಮೂರ್ತಿ ಕಣದಲ್ಲಿದ್ದು, ನ.2ರಂದು ಚುನಾವಣೆ ನಡೆದಿತ್ತು. ಈ ಮಧ್ಯೆ ಸಮೀಕ್ಷೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಹೇಳಿದ್ದು, ರಾಜಕೀಯ ಪಕ್ಷಗಳ ನಾಯಕರಲ್ಲಿ ಎದೆಬಡಿತ ಹೆಚ್ಚಿಸಿದೆ.

ನಿಷೇಧಾಜ್ಞೆ ಜಾರಿ: ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನ.10ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಹಲಗೇವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರಕ್ರಿಯೆ ನಡೆಸಲು ಹಾಗೂ ಸುಗಮವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಐದಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದು, ಯಾವುದೇ ಪ್ರತಿಭಟನೆ ನಡೆಸುವುದು, ಮಾರಕಾಸ್ತ್ರಗಳನ್ನು ಒಯ್ಯವುದು, ಯಾವುದೇ ವಿನಾಶಕಾರಿ ವಸ್ತು ಇಲ್ಲವೇ ಸ್ಪೋಟಕ ವಸ್ತುಗಳ ಸಾಗಾಣೆ, ಕಲ್ಲು ಅಥವಾ ಎಸೆಯುವ ವಸ್ತು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಇನ್ನಿತರೆ ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಕಾರ್ಯಾಚರಣೆ ಅಧಿಕಾರಿಗಳಿಗೆ ಈ ನಿಷೇಧಾಜ್ಞೆಯು ಅನ್ವಯಿಸತಕ್ಕದ್ದಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News