×
Ad

ಬಿಜೆಪಿ ಕಾರ್ಯಕರ್ತರಿಗೆ ತೋಳು ತಟ್ಟಿ ಸವಾಲು ಹಾಕಿದ ಶಾಸಕ ಭೀಮಾನಾಯ್ಕ: ವಿಡಿಯೋ ವೈರಲ್

Update: 2020-11-08 18:08 IST

ಬಳ್ಳಾರಿ: ಬಿಜೆಪಿ - ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಜಟಾಪಟಿ ವೇಳೆ ಶಾಸಕ ಭೀಮಾನಾಯ್ಕ ಅವರು ತೋಳು ತಟ್ಟಿ ಸವಾಲು ಹಾಕಿದ್ದಲ್ಲದೇ,‌  ಹೊಡೆದಾಡಲು ಮುಂದಾಗಿದ್ದಾರೆನ್ನಲಾದ ಘಟನೆ ನಡೆದಿದೆ.

ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷರ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಗೂ ಮುನ್ನ ಘಟನೆ ನಡೆದಿದ್ದು, ಸ್ಥಳೀಯ ಶಾಸಕ ಭೀಮಾನಾಯ್ಕ ತೋಳು ತಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ವಿಡಿಯೋ ಕೂಡಾ ವೈರಲ್ ಆಗಿದೆ. ಬನ್ರೋ ನೋಡ್ಕೋತಿನಿ ಎಂದು ಶಾಸಕರು ಕಾಂಪೌಂಡ್ ಹತ್ತಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. 

ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಹಾಲಿ ಹಾಗೂ ಮಾಜಿ ಶಾಸಕರ ಬಲ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಕೈ ಪರ ಶಾಸಕ ಭೀಮಾನಾಯ್ಕ ಹಾಗೂ ಕಮಲದ ಪರ ಮಾಜಿ ಶಾಸಕ ನೇಮಿರಾಜ್ ನಾಯ್ಕ ನಡುವೆ ಮಾತಿನ ಸಮರ ನಡೆದಿತ್ತು. ಇದೇ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ಸಂಬಂಧ ಸಚಿವ ಶ್ರೀ ರಾಮುಲು ಪ್ರತಿಕ್ರಿಯೆ ನೀಡಿದ್ದು, ಮಾತಿಗೆ ಮಾತು ಬೆಳೆದು ಶಾಸಕ ಭೀಮಾನಾಯ್ಕ್ ಭುಜ ತಟ್ಟಿದ್ದಾರೆ. ಅದು ಮಾಧ್ಯಮಗಳಲ್ಲಿ ಸಹ ಬಂದಿದೆ. ಶಾಸಕ ಭೀಮಾನಾಯ್ಕ್ ಜವಾಬ್ದಾರಿಯುತ ನಾಯಕ. ಅವರ ಘನತೆ ಅಲ್ಲಿ ತೋರಿಸುತ್ತದೆ. ನಿಮ್ಮ ವರ್ತನೆಯೇ ಇಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ತಿಳಿಸಿದ್ದಾರೆ.

ನಮ್ಮ ಸದಸ್ಯರೊಬ್ಬರಿಗೆ ಹುಷಾರಿರಲಿಲ್ಲ. ಹಾಗಾಗಿ ಅಲ್ಲಿ ಪುರಸಭೆ ನಮ್ಮ ಕೈ ತಪ್ಪಿತ್ತು. ಅಲ್ಲಿ ನಡೆದ ಘಟನೆಯಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರ ತಪ್ಪು ಇಲ್ಲ. ಆದ್ರೆ‌ ನಾವು ಸೋತಿದ್ದೇವೆ. ಶಾಸಕ ಭೀಮಾನಾಯ್ಕ್ ಹೊರಗಡೆಯಿಂದ ಜನರನ್ನು ತಂದಿದ್ದಾರೆ ಎಂಬ ಆರೋಪ ಇದೆ. ನೇಮಿರಾಜ್ ನಾಯ್ಕ್ ಮಾಜಿ ಶಾಸಕ ಹಾಗೂ ಮಾಜಿ ಜಿಲ್ಲಾಧ್ಯಕ್ಷರು. ಅವರು ಶಿಸ್ತಿನ ವ್ಯಕ್ತಿ ಎಂದು ಶ್ರೀ ರಾಮುಲು ಹೇಳಿದ್ದಾರೆ.

ತೋಳು ತಟ್ಟಿ ಸವಾಲು ಹಾಕಿದ್ದು ಸರಿಯಲ್ಲ: ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಬಿಜೆಪಿಗೆ ತೋಳು ತಟ್ಟಿ ಸವಾಲು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ತಮ್ಮ ಪಕ್ಷದ ಶಾಸಕನ ವರ್ತನೆಯನ್ನು ಖಂಡಿಸಿದರು. ಶಾಸಕರ ಕೆಲಸ ಜನಸೇವೆ, ಕುಸ್ತಿಯಲ್ಲ. ಭೀಮಾನಾಯ್ಕ್ ತೋಳು ತಟ್ಟಿದ್ದರೆ ಅದು ತಪ್ಪು. ನಮ್ಮ ಶಾಸಕ ಅಂತ ನಾವು ಸಮರ್ಥನೆ ಮಾಡಿಕೊಳ್ಳಲ್ಲ. ಭೀಮಾನಾಯ್ಕ್ ಹಾಗೆ ಮಾಡಿರುವ ಬಗ್ಗೆ ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News