ವಿದ್ಯುತ್ ದರ ಏರಿಕೆ ಹಿಂಪಡೆಯುವಂತೆ ಡಿ.ಕೆ.ಶಿವಕುಮಾರ್ ಆಗ್ರಹ

Update: 2020-11-08 13:33 GMT

ಬೆಂಗಳೂರು, ನ. 8: ರಾಜ್ಯ ಸರಕಾರ ಏರಿಕೆ ಮಾಡಿರುವ ವಿದ್ಯುತ್ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್, ರಾಜ್ಯದ ಜನತೆ ಕಳೆದ 9 ತಿಂಗಳುಗಳಿಂದ ಕೊರೋನ ಮಹಾಮಾರಿಯಿಂದಾಗಿ ತತ್ತರಿಸಿ ಹೋಗಿದ್ದು, ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಇನ್ನು ವ್ಯಾಪಾರಿಗಳಿಗೆ ವ್ಯಾಪಾರವೂ ಇಲ್ಲದಂತಾಗಿದೆ. ಮಾರುಕಟ್ಟೆ ಸಾಗಣೆ ಸೌಲಭ್ಯ, ಕನಿಷ್ಠ ಬೆಲೆ ಇಲ್ಲದೆ ರೈತರ ಉತ್ಪನ್ನಗಳು ಹಾಗೂ ಬದುಕು ಹಾಳಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೊರೋನ ಮಹಾಮಾರಿ ಭಾದಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್‍ದರ ಏರಿಕೆ ಮಾಡಿ ಜನ ಸಾಮಾನ್ಯರ ಕೈ ಸುಡುವುದನ್ನು ತಪ್ಪಿಸಲು ಮುಂದಾಬೇಕು. ಅದಕ್ಕಾಗಿ, ತಕ್ಷಣದಿಂದಲೇ ದರ ಏರಿಕೆಯನ್ನು ಕೈಬಿಡಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ. ಕೂಡಲೇ, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಮ್ಮನ್ನು ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News