ಎಸಿಬಿ ದಾಳಿ ಪ್ರಕರಣ: ಕೆಎಎಸ್ ಅಧಿಕಾರಿ ಮನೆಯಲ್ಲಿ ಮುಂದುವರಿದ ಶೋಧ; ವಿಚಾರಣೆಗೆ ಹಾಜರಾಗಲು ನೋಟಿಸ್

Update: 2020-11-08 13:50 GMT

ಬೆಂಗಳೂರು, ನ. 8: ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಹಾಗೂ ಆಪ್ತರ ನಿವಾಸಗಳಲ್ಲಿ ಎಸಿಬಿ ತನಿಖಾಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದು, ನಾಳೆ(ನ.9) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಶನಿವಾರ ಸುಧಾ ಅವರ ನಿವಾಸ ಸೇರಿದಂತೆ ಆರು ಕಡೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಜಪ್ತಿ ಮಾಡಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ರವಿವಾರ ಸುಧಾ ಅವರ ಆಪ್ತೆ ಎನ್ನಲಾದ ರೇಣುಕಾ ಚಂದ್ರಶೇಖರ್ ಮನೆ ಮೇಲೂ ಅಧಿಕಾರಿಗಳು ಶೋಧ ನಡೆಸಿದಾಗ, 3.5 ಕೆ.ಜಿ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ರೂಪಾಯಿ ನಗದು, ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ ದಾಖಲೆ ಪತ್ರ, ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ರೇಣುಕಾ ಅವರ ಪತಿ ಚಂದ್ರಶೇಖರ್ ನಿವೃತ್ತ ಡಿವೈಎಸ್ಪಿ ಆಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಕೊಂಡು ನಾಲ್ಕು ಕಂಪೆನಿಗಳು ಹೊಂದಿದ್ದರು ಎನ್ನಲಾಗಿದೆ. ಇನ್ನು, ಈ ರಿಯಲ್ ಎಸ್ಟೇಟ್ ಕಂಪೆನಿಯಲ್ಲಿ ಸುಧಾ ಬೇನಾಮಿ ಆಸ್ತಿ ಹೊಂದಿರುವ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ದಾಳಿ ಸಂಬಂಧ ಅಕ್ರಮ ಸಂಪತ್ತಿನ ಎಣಿಕೆ ನಡೆಯುತ್ತಿದ್ದು, ಒಟ್ಟು ಮೊತ್ತದ ಕುರಿತು ಮಾಹಿತಿ ದೊರೆತಿಲ್ಲ. ನಾಳೆ(ನ.9) ಪತ್ತೆಕಾರ್ಯ ಮುಗಿದರೆ, ಎಲ್ಲವೂ ಹೇಳಲಾಗುವುದು ಎಂದು ಎಸಿಬಿ ತನಿಖಾಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News