ರಾಜ್ಯಾದ್ಯಂತ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ಸೋಂಕು ಹರಡದಂತೆ ಕ್ರಮ
ಬೆಂಗಳೂರು, ನ. 8: ಕೊರೋನ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ರಾಜ್ಯಾದ್ಯಂತ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮ ಕಾಲೇಜುಗಳು ಪುನಾರಂಭಕ್ಕೆ ಸಿದ್ಧಗೊಂಡಿವೆ. ಅದಕ್ಕಾಗಿ ಎಲ್ಲೆಡೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕಾಲೇಜುಗಳಲ್ಲಿ ಸುರಕ್ಷಿತ ಅಂತರ ಕಾಪಾಡುವಿಕೆಗೆ ಪ್ರಮುಖ ಮಾನ್ಯತೆ ನೀಡಲಾಗುತ್ತಿದೆ. ಅಲ್ಲದೆ, ಮಾಸ್ಕ್ ಧರಿಸುವುದು, ಕೈ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜುಗಳಿಗೆ ಸೂಚಿಸಲಾಗಿದೆ. ಅದರ ಜತೆಗೆ ಕಾಲೇಜುಗಳಲ್ಲಿ ಬರುವ ಹೋಗುವವರ ಮೇಲೆ ನಿಗಾ ವಹಿಸಲು ಸಿಸಿಟಿವಿ ಕಣ್ಗಾವಲಿಡಲಾಗಿದೆ.
ಶಾಲೆ ಆರಂಭ ಕುರಿತು ಇದೀಗ ಚರ್ಚೆ ನಡೆಯುತ್ತಿರುವಾಗಲೇ ರಾಜ್ಯ ಸರಕಾರ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ನ. 17ರಿಂದ ಆರಂಭಿಸಲಾಗುತ್ತಿದೆ. ಈಗಾಗಲೇ ಭಾಗಶಃ ಬೆಂಗಳೂರು ನಗರದ ಕಾಲೇಜುಗಳ ಆವರಣ ಹಾಗೂ ತರಗತಿಯೊಳಗೆ ಸಿಸಿಟಿವಿ ಅಳವಡಿಕೆ ಇದ್ದು, ಇದರ ಸಹಾಯದ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನ ಗಮನಿಸಬಹುದಾಗಿದೆ.
ಇದರೊಟ್ಟಿಗೆ ಆಯಾ ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿಕೊಂಡು ಜವಾಬ್ದಾರಿ ಹೊರಬೇಕು. ಇವರು ವಿದ್ಯಾರ್ಥಿಗಳಿಗೆ ಕೊರೋನ ಮಾರ್ಗಸೂಚಿಯ ಬಗ್ಗೆ ವಿವರಿಸಬೇಕು. ಅಂದರೆ ಮಾಸ್ಕ್ ಧರಿಸುವಂತೆ, ಸುರಕ್ಷಿತ ಅಂತರ ಕಾಪಾಡುವಂತೆ ತಿಳಿ ಹೇಳಬೇಕು. ತಪ್ಪದೇ ಇದನ್ನ ಪಾಲಿಸುವಂತೆ ಕಮಿಟಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.