ಚುನಾವಣಾ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಹೆಚ್ಚುವರಿ ರಜೆ ಮಂಜೂರಿಗೆ ಹೊರಟ್ಟಿ ಮನವಿ

Update: 2020-11-08 16:35 GMT

ಬೆಂಗಳೂರು, ನ. 8: ಚುನಾವಣಾ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಚುನಾವಣೆ ನಡೆಯುವ ಹಿಂದಿನ ದಿನ ಹಾಗೂ ಚುನಾವಣೆ ನಡೆದ ಮರುದಿನ ರಜೆ ಮಂಜೂರು ಮಾಡಬೇಕೆಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ಚುನಾವಣಾ ಕಾರ್ಯಕ್ಕೆ ಹಾಜರಾಗುವ ಶಿಕ್ಷಕರು ದೂರದ ಊರುಗಳಿಂದ ಬಂದಿರುತ್ತಾರೆ. ಹೀಗಾಗಿ ಚುನಾವಣೆ ನಡೆಯುವ ಮುಂಚಿನ ದಿನ ಹಾಗೂ ಚುನಾವಣೆಯ ಮರುದಿನ ರಜೆ ಮಂಜೂರು ಮಾಡುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಚುನಾವಣೆಯ ಹಿಂದಿನ ದಿನ ಶಾಲೆಯ ಕೆಲಸಕ್ಕೆ ಹೋಗಿ, ನಂತರ ಚುನಾವಣಾ ಕರ್ತವ್ಯಕ್ಕೆ ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ಮತ್ತು ಚುನಾವಣೆಯ ಮರುದಿನ ಕೆಲಸಕ್ಕೆ ಹಾಜರಾಗಬೇಕಾದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸಾಮಾನ್ಯವಾಗಿ ಚುನಾವಣೆ ಕೆಲಸ ಸಂಪೂರ್ಣವಾಗಿ ಮುಗಿಯಬೇಕಾದರೆ ತಡರಾತ್ರಿಯಾಗುತ್ತದೆ. ಆಗ ಶಿಕ್ಷಕರು ಮನೆಗಳನ್ನು ತಲುಪಲು ವಾಹನ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಅವರು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ, ಕೆಲವೊಂದು ಸಾರಿ ತಹಶೀಲ್ದಾರರ ಕಚೇರಿಯಲ್ಲಿಯೇ ಉಳಿದುಕೊಂಡು ಮರುದಿನ ಬೆಳಿಗ್ಗೆ ಮನೆ ತಲುಪಿರುವ ಉದಾಹರಣೆಗಳಿವೆ ಎಂದು ಅವರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣೆ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಚುನಾವಣೆ ನಡೆಯುವ ಮುಂಚಿನ ದಿನ ಹಾಗೂ ಚುನಾವಣೆ ಮರುದಿನ ರಜೆ ಮಂಜೂರಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಬಸವರಾಜ ಹೊರಟ್ಟಿ ಚುನಾವಣಾ ಆಯೋಗಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News