ದೇವಾಲಯದ ಹಣ ದುರ್ಬಳಕೆ ಆರೋಪ: ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

Update: 2020-11-09 11:43 GMT

ಬೆಂಗಳೂರು, ನ.9: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಗಿರಿಯಲ್ಲಿರುವ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆದಾಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ಅರ್ಜಿಯಾಗಿ ಪರಿವರ್ತಿಸಿಕೊಂಡಿದೆ.

ಅರ್ಜಿದಾರರು ದೇವಸ್ಥಾನದ ಮೇಲೆ ಈ ಹಿಂದೆ ಹಕ್ಕು ಚಲಾಯಿಸಲು ಮುಂದಾಗಿದ್ದರು. ಅದಕ್ಕಾಗಿ ಎರಡು ಬಾರಿ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ವಿಫಲವಾದ ನಂತರ ಪಿಐಎಲ್ ದಾಖಲಿಸಿದ್ದಾರೆ ಎಂದು ಪ್ರತಿವಾದಿ ಪರ ವಕೀಲರು ಆರೋಪಿಸಿದ ಹಿನ್ನೆಲೆಯಲ್ಲಿ ಹಾಗೂ ದೇವಸ್ಥಾನ ಸಾರ್ವಜನಿಕ ಪ್ರದೇಶದಲ್ಲಿದೆ ಎಂಬ ಕಾರಣಗಳ ಮೇರೆಗೆ ಅರ್ಜಿದಾರರನ್ನು ಪ್ರಕರಣದಿಂದ ಕೈಬಿಟ್ಟು ಸ್ವಯಂಪ್ರೇರಿತ ಅರ್ಜಿಯಾಗಿ ಬದಲಾಯಿಸಿಕೊಂಡಿದೆ.

ದೇವಸ್ಥಾನದ ಆದಾಯವನ್ನು ಆಡಳಿತ ಮಂಡಳಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತರೀಕೆರೆಯ ಎಂ.ಸಿ.ಹಳ್ಳಿ ನಿವಾಸಿ ವೇಲುಮುರುಗನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಕೀಲರ ವಾದ ಆಲಿಸಿದ ಪೀಠ, ಅರ್ಜಿದಾರರು ದೂರುದಾರರಾಗಿದ್ದರೂ ದೇವಸ್ಥಾನದಲ್ಲಿ ಹಿತಾಸಕ್ತಿ ಹೊಂದಿದ್ದಾರೆ. ಹೀಗಾಗಿ ಸ್ವಯಂಪ್ರೇರಿತ ಪಿಐಎಲ್ ಅರ್ಜಿಯಾಗಿ ಬದಲಾಯಿಸಿಕೊಳ್ಳುತ್ತಿರುವುದಾಗಿ ಆದೇಶಿಸಿ, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಈ ದೇವಾಲಯವನ್ನು ಮಠಾಧೀಶರೊಬ್ಬರು ನಿರ್ವಹಿಸುತ್ತಿದ್ದು, ದೇವಸ್ಥಾನಕ್ಕೆ ವಾರ್ಷಿಕ 65 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದು, ಈ ಹಣವನ್ನು ದೇವವಸ್ಥಾನದ ಟ್ರಸ್ಟಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಿಂದಲೂ ಸಾಕಷ್ಟು ಆದಾಯ ಬರುತ್ತದೆ. ಹಣ ದುರ್ಬಳಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರಕಾರ, ದೇವಸ್ಥಾನಕ್ಕೆ ಸಂಬಂಧಿಸಿದ ಚಂದ್ರಘೋಷ್ ಮತ್ತು ಕಾರ್ತಿಕ್‍ಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ, ದೇವಸ್ಥಾನ ಮತ್ತು ಸುತ್ತಲಿನ ಕಲ್ಯಾಣ ಮಂಟಪ ಮತ್ತಿತರೆ ಕಟ್ಟಡಗಳನ್ನು ಸರಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿರುವ ಬಗ್ಗೆ ತಹಶೀಲ್ದಾರ್ ಸರಕಾರಕ್ಕೆ ವರದಿ ಸಲ್ಲಿಸಿರುವ ವಿಚಾರವನ್ನು ಪತ್ತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವ್ಯಾಪ್ತಿಗೆ ಈ ಪ್ರಕರಣ ಬರುತ್ತದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರಕಾರಕ್ಕೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News