ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ: ಮಾಜಿ ಸಚಿವ ಸಂತೋಷ್ ಲಾಡ್

Update: 2020-11-09 11:58 GMT

ಧಾರವಾಡ, ನ. 9: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಹೀಗಾಗಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಹೇಳಿದ್ದಾರೆ.

ಸೋಮವಾರ ಧಾರವಾಡದಲ್ಲಿರುವ ವಿನಯ್ ಅವರ ನಿವಾಸಕ್ಕೆ ಭೇಟಿ ಮಾಡಿ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಬಳಿಕ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧನ ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎಂಬುದು ಗೊತ್ತಾಗಲಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವೂ ಇದೆ. ಕಾನೂನು ಎಲ್ಲರಿಗಿಂತ ದೊಡ್ಡದು. ಹೀಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಅವರೊಂದಿಗೆ ಇದೆ ಎಂದರು.

ದುರ್ಬಳಕೆ: ಕೇಂದ್ರದ ಬಿಜೆಪಿ ಸರಕಾರ ಐಟಿ, ಇಡಿ, ಸಿಬಿಐ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಸ್ವಾರ್ಥ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಕರ್ನಾಟಕ ಮಾತ್ರವಲ್ಲ. ಇಡೀ ದೇಶದಲ್ಲಿ ಇಂತಹ ಪ್ರಕರಣಗಳು ಆಗುತ್ತಿವೆ. ಯಾರ ಮೇಲೆಯೂ ವೈಯಕ್ತಿಕ ದ್ವೇಷ ಇಲ್ಲ. ಆದರೆ, ಅತ್ಯಾಚಾರ ಸಂತ್ರಸ್ತೆ ಕುಟುಂಬದವರನ್ನು ಭೇಟಿಗೆ ತೆರಳುತ್ತಿದ್ದ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ತಳ್ಳಾಟ ಮಾಡುತ್ತಾರೆ ಎಂದರೆ ಏನು ಹೇಳಬೇಕು ಎಂದು ಟೀಕಿಸಿದರು.

ಬಿಜೆಪಿಯ ಕೆಲ ಮುಖಂಡರು ನಾವು ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತೇವೆ ಎಂದಿದ್ದಾರೆ. ಆದರೆ, ಅಧಿಕಾರ ಎಂದಿಗೂ ಶಾಶ್ವತವಲ್ಲ. ಈ ಸತ್ಯ ಬಿಜೆಪಿಯ ಕೆಲವರಿಗೆ ಇನ್ನೂ ತಿಳಿದಂತಿಲ್ಲ. ಈಗಂತೂ ಏನು ಮಾಡುವುದು ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ. ಈ ಸಮಯ ಮುಂದೆ ಕಳೆದು ಹೋಗಿ ನಮಗೂ ಒಳ್ಳೆಯ ಕಾಲ ಬರುತ್ತದೆ ಎಂದು ಸಂತೋಷ ಲಾಡ್ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News