ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ದಿಲ್ಲಿಗೆ ದೌಡು

Update: 2020-11-09 12:03 GMT

ಹೊಸದಿಲ್ಲಿ, ನ. 9: ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಆರಂಭವಾಗಿದ್ದು, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.

`ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಳಿಕ ಹೊಸದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಮಾಡುವೆ' ಎಂದು ಯಡಿಯೂರಪ್ಪ ಪ್ರಕಟಿಸಿದ ಬೆನ್ನಲ್ಲೆ ಸಚಿವ ಸ್ಥಾನದ ಆಕಾಂಕ್ಷಿಗಳು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ವರಿಷ್ಠರನ್ನು ಭೇಟಿ ಮಾಡುತ್ತಿದ್ದ ತಮ್ಮದೇ ಮೂಲಗಳ ಮೂಲಕ ಲಾಬಿ ಆರಂಭಿಸಿದ್ದಾರೆ.

ಸಿ.ಟಿ.ರವಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವೂ ಸೇರಿದಂತೆ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಕ್ಕೆ ಹತ್ತಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದ್ದು, ಕೆಲವರಿಗೆ ಸಚಿವ ಸ್ಥಾನವನ್ನು ನೀಡುವ ಅನಿವಾರ್ಯತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಿಲುಕಿದ್ದಾರೆ.

ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿರುವ ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಸೋಮವಾರ ಬೆಳಗ್ಗೆಯೇ ಕೊಲ್ಕೊತಾಗೆ ತೆರಳಲಿರುವ ಅವರು ಹೂಗ್ಲಿ ನದಿ ದಂಡೆಯಲ್ಲಿರುವ ಕಾಳಿಮಾತಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಹೊತ್ತಿಗೆ ಹೊಸದಿಲ್ಲಿ ತಲುಪಲಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮುಂದುವರಿಸಲಿದ್ದಾರೆಂದು ಹೇಳಲಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಹಿರಿಯ ಶಾಸಕ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿ ಸಹಿತ ಹತ್ತಕ್ಕೂ ಹೆಚ್ಚು ಮಂದಿ ಸಚಿವ ಸ್ಥಾನದ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ, ಕಾಗಿನೆಲೆಯಲ್ಲಿ ಮಾತನಾಡಿದ ಸಚಿವ ಸ್ಥಾನದ ಆಕಾಂಕ್ಷಿ ಎಂ.ಟಿ.ಬಿ.ನಾಗರಾಜ್, `ಉಪಚುನಾವಣೆ ಫಲಿತಾಂಶದ ಬಳಿಕ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವುದು ನಿಶ್ಚಿತ' ಎಂದರು.

`ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲು ಕಾರಣನಾಗಿದ್ದೇನೆ. ಹೀಗಾಗಿ ನಾನು ಮತ್ತೆ ಮಂತ್ರಿ ಆಗುವುದು ಖಚಿತ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನಗೆ ಯಾವ ಖಾತೆಯನ್ನಾದರೂ ಕೊಡಲಿ, ಅದನ್ನು ನಾನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆ' ಎಂದು ಎಂ.ಟಿ.ಬಿ.ನಾಗರಾಜ್ ಇದೇ ವೇಳೆ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News