ಕೆಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: 200ಕ್ಕೂ ಹೆಚ್ಚು ಸ್ವತ್ತುಗಳ ದಾಖಲೆ ಪತ್ರ ಪತ್ತೆ

Update: 2020-11-09 14:14 GMT

ಬೆಂಗಳೂರು, ನ.9: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ ಅವರ ಮನೆ ಮೇಲಿನ ಎಸಿಬಿ ದಾಳಿ ಪ್ರಕರಣ ಸಂಬಂಧ 200ಕ್ಕೂ ಹೆಚ್ಚು ಸ್ವತ್ತುಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳು ಪತ್ತೆಯಾಗಿವೆ.

ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ಇತ್ತೀಚಿಗೆ ನಗರದ ಕೋಡಿಗೆಹಳ್ಳಿಯಲ್ಲಿನ ಡಾ.ಬಿ.ಸುಧಾ ಅವರ ಮನೆ ಸೇರಿದಂತೆ 7 ಸ್ಥಳಗಳಲ್ಲಿ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಸುಧಾ, ಅವರ ಕುಟುಂಬ ಸದಸ್ಯರು, ಅವರಿಗೆ ಪರಿಚಯ ಇರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು, ಆಸ್ತಿಗಳ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳಿರುವುದು ಬೆಳಕಿಗೆ ಬಂದಿದೆ.

ಸುಧಾ ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳು, ಸುಮಾರು 50ಕ್ಕೂ ಹೆಚ್ಚು ಅಧಿಕ ಚೆಕ್ ಲೀಫ್‍ಗಳು ಪತ್ತೆಯಾಗಿವೆ.

ಆರೋಪಿ ಮತ್ತು ಅವರೊಂದಿಗೆ ವ್ಯವಹಾರದ ಸಂಬಂಧ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಯಲ್ಲಿ 36.89 ಲಕ್ಷ ನಗದು ಹಣ ದೊರೆತಿದೆ. ಸುಧಾ ಮತ್ತು ಅವರಿಗೆ ಸಂಬಂಧಪಟ್ಟ ಇತರ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿ ಸುಮಾರು 3.5 ಕೋಟಿ ರೂ. ಠೇವಣಿ ಪತ್ತೆಯಾಗಿದೆ ಎಂದು ಎಸಿಬಿ ಹೇಳಿದೆ.

ಅಪಾರ ಚಿನ್ನ: ದಾಳಿ ಸಂಬಂಧ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿರುವ ಎಸಿಬಿ, 3.7 ಕೆಜಿ ಚಿನ್ನಾಭರಣ, 10.5 ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದೆ. ಅಲ್ಲದೆ, ದಾಖಲಾತಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಯುತ್ತಿದ್ದು ಶೋಧ ಕಾರ್ಯಾಚರಣೆ ಬಳಿಕ ಸುಧಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News