ಯಡಿಯೂರಪ್ಪ ಕಾರ್ಪೋರೆಟ್ ಕಂಪೆನಿಗಳ ಸಾಕುಮಗ: ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ್

Update: 2020-11-09 13:37 GMT

ಶಿವಮೊಗ್ಗ, ನ.9: ಭೂ ಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರಿವಾಜ್ಞೆ ತಂದಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ರೈತ ಕುಲಕ್ಕೆ ವಿಷ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮುಂದೆ ಯಡಿಯೂರಪ್ಪ ನವರನ್ನು ರೈತರ ಮಗ ಎಂದು ಯಾರೂ ಕರೆಯಬೇಡಿ. ಕಾರ್ಪೋರೆಟ್ ಕಂಪೆನಿಗಳ ಸಾಕುಮಗ ಎಂದು ಕರೆಯಿರಿ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆಗಳ ವಿರುದ್ಧ ಮತ್ತು ರಾಜ್ಯ ಸರ್ಕಾರ ತಂದಿದ್ದ ಸುಗ್ರಿವಾಜ್ಙೆಗಳ ವಿರುದ್ಧ ರಾಜ್ಯಾದ್ಯಂತ ಚಳುವಳಿಗಳು ನಡೆದಿವೆ. ರೈತ, ದಲಿತ, ಕಾರ್ಮಿಕ ಸಂಘಟನೆಗಳು ಐಕ್ಯ ಹೋರಾಟದ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಜ ರಾಜ್ಯ ಸರ್ಕಾರದ ಗಮನ ಸೆಳೆದಿದ್ದೆವು. ಮುಖ್ಯಮಂತ್ರಿ ಮಾತುಕತೆಗೆ ಕರೆದಾಗ ನೇರವಾಗಿಯೇ ಮಸೂದೆ ಕೈಬಿಡುವಂತೆ ತಿಳಿಸಿದ್ದೆವು. ಆದರೆ ಯಡಿಯೂರಪ್ಪನವರು ಅವರ ಸಂತತಿ ರಾಜಕೀಯವನ್ನು ಉಳಿಸಿಕೊಳ್ಳುವ ಸಲುವಾಗಿ ಇಳಿ ವಯಸ್ಸಿನಲ್ಲಿ ರೈತ ಕುಲವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುಗ್ರಿವಾಜ್ಞೆಗಳ ವಿರುದ್ಧ ಹೋರಾಟವನ್ನು ವಿಸ್ತೃತ ನೆಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ನವೆಂಬರ್ 11 ರಂದು ಧಾರವಾಡದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಹೋರಾಟದ ರೂಪುರೇಷ ಸಿದ್ದಪಡಿಸಲಾಗುವುದು ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಯಡಿಯೂರಪ್ಪನವರು ರೈತ ವಿರೋಧಿ ಸಂಸ್ಕೃತಿ ಮುಂದುವರಿಸಿದರೆ ನಿಮ್ಮ ಮುಂದಿನ ಸಂತತಿ ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂದರು.

ಪ್ರಧಾನಿ ಮೋದಿಯವರು ಸುಳ್ಳು ಹೇಳುವುದನ್ನು ಬಿಡಬೇಕು. ನೀವೇ ಜಾರಿಗೆ ತಂದ ಎಂಎಸ್ ಪಿ ಯಿಂದ ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಪ್ರಧಾನಿ ಮೋದಿಯವರು ದೇಶವನ್ನು ಆಳಲು ಅನ್ ಫಿಟ್. ಭಾವನಾತ್ಮಕವಾಗಿ ಜನರನ್ನು ವಂಚಿಸುವುದು ಸಾಕು. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್ ಕೊಡುವುದನ್ನು ಬಿಟ್ಟು ಕರ್ನಾಟಕ ರಾಜ್ಯದ ಬಗ್ಗೆ ತಿರಸ್ಕಾರದ ಮನೋಭಾವ ಯಾಕೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರವಿಕಿರಣ್ ಪುಣಚ, ರವಿಕುಮಾರ್ ಬಲ್ಲೂರ್, kರಿಬಸಪ್ಪ ಗೌಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News