ಮಾಂದಲಪಟ್ಟಿ ಇನ್ನು 'ಪ್ಲಾಸಿಕ್ ಮುಕ್ತ' ತಾಣ: ಅರಣ್ಯ ಇಲಾಖೆಯಿಂದ ಕ್ರಮ

Update: 2020-11-09 13:55 GMT

ಮಡಿಕೇರಿ, ನ.9: ಪಶ್ಚಿಮಘಟ್ಟ ಸಾಲಿಗೆ ಒಳಪಡುವ ಮಾಂದಲ ಟ್ಟಿ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಎತ್ತ ನೋಡಿದರೂ ಹಚ್ಚ ಹಸುರಿನ ಕಾಡು ಮತ್ತು ಮಂಜು ತಬ್ಬಿದ ಬೆಟ್ಟ ಶ್ರೇಣಿಗಳನ್ನು ಒಳಗೊಂಡಿರುವ ಈ ತಾಣ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. 

ಸಹಸ್ರ ಸಂಖ್ಯೆಯಲ್ಲಿ ಇತ್ತ ಕಡೆ ಪ್ರವಾಸಿಗರು ಬರುವ ಕಾರಣ ಮಾಂದಲಪಟ್ಟಿಯ ನೈಸರ್ಗಿಕ ಸೌಂದರ್ಯಕ್ಕೆ ಪ್ಲಾಸ್ಟಿಕ್ ಕಸ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಹದ್ದು ಮೀರಿದ ವರ್ತನೆಗಳ ಕಾರಣ ಒಡೆದು ಹಾಕಲಾದ ಮದ್ಯದ ಬಾಟಲಿಗಳ ರಾಶಿ ರಾಶಿ ಚೂರುಗಳು ಮಾಂದಲಪಟ್ಟಿಯ ಬೆಟ್ಟದ ನೆತ್ತಿಯ ಮೇಲೆ ಸುರಿಯಲ್ಪಟ್ಟಿದ್ದವು. 

ಆದರೆ ಮಡಿಕೇರಿ ವಲಯ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ಇದೀಗ ಮಾಂದಲಪಟ್ಟಿಯ ಸ್ಥಿತಿಯೇ ಬದಲಾಗಿದೆ. ಈ ಪರಿಸರ ತಾಣವನ್ನು ಪ್ಲಾಸ್ಟಿಕ್ ಮುಕ್ತ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಕೊಡಗು ಅರಣ್ಯ ಇಲಾಖೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಕೊರೋನ ಲಾಕ್‍ಡೌನ್ ಸಂದರ್ಭ ಮಾಂದಲಪಟ್ಟಿಯನ್ನು ಕೂಡ ಬಂದ್ ಮಾಡಲಾಗಿತ್ತು. ಈ ಅವಧಿಯನ್ನು ಬಳಸಿಕೊಂಡ ಮಡಿಕೇರಿ ಅರಣ್ಯ ಇಲಾಖೆ, ಇಡೀ ಮಾಂದಲಪಟ್ಟಿಯನ್ನು ಕಸ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸಿದೆ. ಮಾತ್ರವಲ್ಲದೇ ಪ್ರವಾಸಿಗರಿಗೆ ನಿಸರ್ಗ ಸೌಂದರ್ಯ ಸವಿಯಲು ಅನುಕೂಲವಾಗುವ ಕಡೆಗಳಿಗೆ ಮಾತ್ರವೇ ತೆರಳಲು ಸಾಧ್ಯವಾಗುವಂತೆ ಕೆಲವು ಕಾಮಗಾರಿಗಳನ್ನು ಕೂಡ ಮಾಂದಲಪಟ್ಟಿಯಲ್ಲಿ ಅನುಷ್ಟಾನಗೊಳಿಸಿದೆ. ಹೀಗಾಗಿ ಮೊದಲಿನಂತೆ ಹದ್ದು ಮೀರಿದ ವರ್ತನೆ, ಬೇಕಾಬಿಟ್ಟಿ ನಡವಳಿಕೆಗೆ ಇದೀಗ ಅರಣ್ಯ ಇಲಾಖೆ ಅಂಕುಶ ಹಾಕಿದೆ. 

ನ.1 ರಿಂದ ಮಾಂದಲಪಟ್ಟಿಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಆದರೆ ಮಾಂದಲಪಟ್ಟಿಯ ಪ್ರವೇಶ ದ್ವಾರದಲ್ಲಿಯೇ ಚೆಕ್‍ಪೋಸ್ಟ್ ಅನ್ನು ಅಳವಡಿಸಿ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ ಒಳ ಬಿಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ, ಒಳ ತೆರಳುವ ಪ್ರತಿ ವಾಹನವನ್ನು ಕೂಡ ಅರಣ್ಯ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದು, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಚಿಪ್ಸ್ ಪ್ಯಾಕೇಟ್‍ಗಳು, ಬೀಡಿ, ಸಿಗರೇಟ್, ಲೈಟರ್, ಮದ್ಯದ ಬಾಟಲಿಗಳು ಇನ್ನಿತರ ಪ್ಲಾಸ್ಟಿಕ್ ಹೊದಿಕೆಯಿಂದ ಕೂಡಿರುವ ಯಾವುದೇ ವಸ್ತುಗಳನ್ನು ಮಾಂದಲಪಟ್ಟಿ ಒಳಗೆ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಅನಿವಾರ್ಯವಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ಒಳಭಾಗಕ್ಕೆ ಕೊಂಡೊಯ್ಯಬೇಕಾದಲ್ಲಿ ಪ್ರತಿ ಬಾಟಲಿಗೆ 50 ರೂ.ನಂತೆ ಪ್ರವೇಶ ದ್ವಾರದ ಚೆಕ್ ಪೋಸ್ಟ್‍ನಲ್ಲಿ ಡಿಪಾಸಿಟ್ ಮಾಡಬೇಕಿದೆ. ಈ ಬಾಟಲಿಗಳಿಗೆ ಅರಣ್ಯ ಇಲಾಖೆ ಒಂದು ಸ್ಟಿಕ್ಕರ್ ಅನ್ನು ಅಂಟಿಸುತ್ತಿದ್ದು, ಮರಳಿ ಬಂದಾಗ ಆ ಬಾಟಲಿ ಸಹಿತ ಸ್ಟಿಕ್ಕರ್ ಅನ್ನು ತಪಾಸಣಾ ಗೇಟ್‍ನಲ್ಲಿ ತೋರಿಸಿದರೆ ಹಣವನ್ನು ಮರಳಿ ಪ್ರವಾಸಿಗರಿಗೆ ನೀಡಲಾಗುತ್ತಿದೆ. ಇದರಿಂದ ಮಾಂದಲಪಟ್ಟಿಯಲ್ಲಿ ಪ್ಲಾಸ್ಟಿಕ್ ಕಸದ ಸಮಸ್ಯೆ ಸಂಪೂರ್ಣ ಹತೋಟಿಗೆ ಬಂದಿದೆ ಎಂದು ಡಿಎಫ್‍ಓ ಪ್ರಭಾಕರನ್ ಮಾಹಿತಿ ನೀಡಿದರು.

ಮೊದಲಿನಂತೆ ಎಲ್ಲಾ ಕಡೆಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುವುದಕ್ಕೂ ಕೂಡ ಇಲಾಖೆ ನಿರ್ಬಂಧ ಹೇರಿದ್ದು, ವೀವ್ ಪಾಯಿಂಟ್‍ಗಳನ್ನು ನಿರ್ಮಿಸಿ ಅಲ್ಲಿಗೆ ತೆರಳಲು ಮಾತ್ರವೇ ಅವಕಾಶ ನೀಡಿದೆ. ಇದರಿಂದಾಗಿ ಅಕ್ರಮ ಮತ್ತು ಅನೈತಿಕ ಚಟುವಟಿಕೆಗೂ ಕಡಿವಾಣ ಬಿದ್ದಿದೆ. ಪ್ರವೇಶ ದ್ವಾರದಿಂದ ಮಾಂದಲಪಟ್ಟಿಯ ವೀವ್ ಪಾಯಿಂಟ್‍ಗೆ ತೆರಳುವ 3.5 ಕಿ.ಮೀ ರಸ್ತೆಯಲ್ಲಿ ಯಾವುದೇ ವಾಹನಗಳು ನಿಲ್ಲುವಂತಿಲ್ಲ ಎಂಬ ನಿಯಮ ಜಾರಿಗೊಳಿಸಲಾಗಿದೆ. 

ಇನ್ನು ನಾಲ್ಕು ಚಕ್ರದ ವಾಹನಕ್ಕೆ 50 ರೂ., ಬೈಕ್‍ಗೆ 15 ರೂ.ನಂತೆ ಪಾರ್ಕಿಂಗ್ ಶುಲ್ಕ ನಿಗಧಿ ಮಾಡಿದೆ. ಒಳಗೆ ತೆರಳುವ ಪ್ರತಿ ವಿದೇಶಿ ಪ್ರಜೆಗೆ 100 ರೂ. ಭಾರತೀಯರಿಗೆ 25 ರೂ. ಶುಲ್ಕವಿದ್ದು, 10 ವರ್ಷದ ಕೆಳಗಿನ ಮಕ್ಕಳಿಗೆ 10 ರೂ. ಶುಲ್ಕ ನಿಗದಿ ಮಾಡಲಾಗಿದೆ. 

ಮಾಂದಲಪಟ್ಟಿಯಲ್ಲಿ ಅರಣ್ಯ ಇಲಾಖೆ ಹಲವಾರು ಪರಿಸರ ಸ್ನೇಹಿ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕ, ಶೌಚಾಲಯ, ಸರ್ವ ಋತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಈ ಕಾಮಗಾರಿಗಳು ಆರಂಭವಾಗಲಿದೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದರೂ, ಹೇಳುವವರು ಕೇಳುವವರು ಯಾರು ಇಲ್ಲದೇ ಮೋಜು ಮಸ್ತಿಯ ಹೆಸರಲ್ಲಿ ಮಾಂದಲಪಟ್ಟಿಯ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಎಲ್ಲಾ ಪರಿಸರ ವಿರೋಧಿ ಕೃತ್ಯಗಳಿಗೆ ಇದೀಗ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಮಾಂದಲಪಟ್ಟಿ ಮತ್ತೆ ತನ್ನ ಗತ ವೈಭವವನ್ನು ಮರಳಿ ಪಡೆದುಕೊಂಡಿದೆ.

500 ರೂ. ದಂಡ: ಮಾಂದಲಪಟ್ಟಿ ಇದೀಗ ಕಸ ಮುಕ್ತವಾಗಿದ್ದು, ಪ್ಲಾಸ್ಟಿಕ್ ವಸ್ತುಗಳನ್ನು ಒಳಗೆ ಕೊಂಡೊಯ್ಯುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮೋಜು ಮಸ್ತಿಯ ಹೆಸರಲ್ಲಿ ಹದ್ದುಮೀರಿದ ವರ್ತನೆಗಳಿಗೆ ಕಡಿವಾಣ ಹಾಕಲಾಗಿದೆ. ಈ ಕಾನೂನು ಉಲ್ಲಂಘಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ ಒಳ ಬಿಡಲಾಗುತ್ತಿದ್ದು, ಪ್ರವಾಸಿಗರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಪ್ರವಾಸಿ ಹಾಗೂ ಪರಿಸರ ಸ್ನೇಹಿ ಕೆಲವು ಕಾಮಗಾರಿಗಳನ್ನು ನಡೆಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುತ್ತದೆ. 

ಪ್ರಭಾಕರನ್, ಡಿಎಫ್‍ಓ ಮಡಿಕೇರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News