ರೈತರ ಪರ ನಿಲ್ಲದ ಯಡಿಯೂರಪ್ಪ ಮಠ, ಮಂದಿರಗಳ ಪರ ನಿಲ್ಲುತ್ತಾರೆ: ಬೇಳೂರು ಗೋಪಾಲಕೃಷ್ಣ

Update: 2020-11-09 14:00 GMT

ಶಿವಮೊಗ್ಗ (ನ.09): ರೈತ ಪರ ನಿಲ್ಲದ ಡೋಂಗಿ ಮುಖ್ಯಮಂತ್ರಿ ಯಡಿಯೂರಪ್ಪ ಮಠ, ಮಂದಿರಗಳ ಪರ ನಿಲ್ಲುತ್ತಾರೆ. ರೈತ ಪರ ಕಾಳಜಿ ಇಲ್ಲ. ಹಸಿರು ಶಾಲು ಹೊದ್ದು ರೈತಪರ ಎನ್ನುವ ಈ ಮುಖ್ಯಮಂತ್ರಿಗೆ, ರಾಜ್ಯ ಸರ್ಕಾರದ ಮಂತ್ರಿಗಳಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲದಂತಾಗಿದೆ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಬಿದರಗೋಡಿನಿಂದ ಶನಿವಾರ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೊರಟ ಸಹಕಾರಿ ಮುಖಂಡ ಡಾ.ಆರ್.ಎಮ್. ಮಂಜುನಾಥ್ ಗೌಡ ನೇತೃತ್ವದ ಬೃಹತ್ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿ ಮೂಲಕ ಮಲೆನಾಡಿನ ರೈತರನ್ನು ಸಮಾಧಿ ಮಾಡಲು ಹೊರಟಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಇಲ್ಲ, ರೈತರಿಗೆ ಪರಿಹಾರ ಇಲ್ಲ, ರೈತರು ಕತ್ತಿ ಹಿಡಿದು ಮಲೆನಾಡಿನಲ್ಲಿ ಕೃಷಿಗೆ ಹೊರಟರೆ ಈ ಸರ್ಕಾರ, ಅರಣ್ಯ ಇಲಾಖೆ ರೈತರನ್ನು ಭಯೋತ್ಪಾದಕರಂತೆ ನೋಡುತ್ತಿದೆ. ಈ ರಾಜ್ಯದ ರೈತರಿಗೆ ರೈತ ಪರ ಧ್ವನಿ ಎತ್ತಿದ ಏಕೈಕ ಮುಖ್ಯಮಂತ್ರಿ ಎಂದರೆ ಬಂಗಾರಪ್ಪ ನವರು ಮಾತ್ರ. ರೈತರಿಗೆ ಕೇರಳದಲ್ಲಿ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತಾರೆ, ಈ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಸೊರಬದ ಮಧು ಬಂಗಾರಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿ ಮಲೆನಾಡಿನ ರೈತರಿಗೆ ಮರಣ ಶಾಸನವಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ರೈತ ವಿರೋಧಿ ಸರ್ಕಾರವಾಗಿದೆ. ಗೇಣಿ ಶಾಸನದ ಮೂಲಕ ಮಲೆನಾಡಿನ ರೈತರಿಗೆ ಭೂಮಿ ಸಿಗುವಂತೆ ಮಾಡಿದ ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ಸದಾಶಿವರಾಯರು, ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರ ತ್ಯಾಗ, ಬಲಿದಾನವನ್ನು ನಾವೆಂದೂ ಮರೆಯಬಾರದು. ಇಂದಿನ ಶಾಸಕರು, ಮಂತ್ರಿಗಳು,ಈ ಸರ್ಕಾರಕ್ಕೇ ನಾಚಿಕೆ ಆಗಬಾರದೆ ಎಂದರು.

ಕಾರ್ಯಕ್ರಮದ ರೂವಾರಿ ಸಹಕಾರಿ ನಾಯಕ ಆರ್.ಎಂ.ಮಂಜುನಾಥ್ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಆಕೇಶಿಯ ನೆಡುತೋಪು ವಿಚಾರಗಳ ಬಗ್ಗೆ ಮಲೆನಾಡಿನ ರೈತ ಸಮೂಹ ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ. ಬಡವರ, ರೈತರ, ಕೂಲಿ ಕಾರ್ಮಿಕ ವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲಗೊಂಡು ರೈತರನ್ನು ವಿನಾಶಕ್ಕೆ ತಳ್ಳಿದೆ ಎಂದರು.

ಪರಿಸರ ವಾದಿ ಕಲ್ಯಾಳ ಶ್ರೀಧರ್ ಮಾತನಾಡಿ, ಮಲೆನಾಡಿನಲ್ಲಿ ರೈತರ ಬದುಕಿನ, ಕೃಷಿ ಸಮಸ್ಯೆಗಳನ್ನು ಬಗೆಹರಿಸುವ ಏಕೈಕ ಶಕ್ತಿ ಇರುವುದು ಆರ್.ಎಮ್.ಮಂಜುನಾಥ್ ಗೌಡರಿಂದ ಮಾತ್ರ. ಮಲೆನಾಡನ್ನು ಹೊಸ ಮನ್ವಂತರಕ್ಕೆ ತೆಗೆದುಕೊಳ್ಳುವ ಶಕ್ತಿ, ಜವಾಬ್ದಾರಿ, ಇರುವುದು ಅವರಿಗೆ ಮಾತ್ರ ಎಂದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಕೆ.ಎಲ್.ಅಶೋಕ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ವಾಗಿರುವ ಕಸ್ತೂರಿ ರಂಗನ್ ವರದಿ, ತಿದ್ದುಪಡಿಗಳು ಅಂಬಾನಿ, ಅದಾನಿ ಯಂತಹ ಕಾರ್ಪೋರೇಟ್ ಶಕ್ತಿಗಳಿಗೆ ಮಾರುವ ಹುನ್ನಾರ ಎಂದು ತಿಳಿಸಿದರು.

ಪರಿಸರ ಹೋರಾಟಗಾರ, ಸಾಹಿತಿ ಕಲ್ಕುಳಿ ವಿಠ್ಠಲ್ ಹೆಗಡೆ ಕಸ್ತೂರಿ ರಂಗನ್ ವರದಿ ವಿಚಾರಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ವಿಜಯದೇವ್, ದುಗ್ಗಪ್ಪ ಗೌಡ, ಡಾ.ಸುಂದರೇಶ್, ಮುಂತಾದವರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿ ನಿರೂಪಿಸಿದರು.

ಪ್ರತಿಭಟನಾ ಸಭೆ ನಂತರ ತಹಶೀಲ್ದಾರ್ ಮೂಲಕ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News