'ಪವರ್ ಟಿವಿ' ಕಚೇರಿ ಮೇಲೆ ದಾಳಿ ವಿಚಾರ: ದಾಖಲೆ, ಉಪಕರಣಗಳನ್ನು ವಾಪಸ್ ನೀಡಲು ಹೈಕೋರ್ಟ್ ಆದೇಶ

Update: 2020-11-09 14:08 GMT

ಬೆಂಗಳೂರು, ನ.9: ಹಿರಿಯ ರಾಜಕಾರಣಿಯ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತು ಸುದ್ದಿ ಪ್ರಸಾರ ಮಾಡಿದ ಪವರ್ ಟಿವಿ ಲೈವ್ ಬಂದ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ದಾಖಲೆ ಹಾಗೂ ಉಪಕರಣಗಳನ್ನು ಏಳು ದಿನಗಳಲ್ಲಿ ವಾಪಸ್ ನೀಡುವಂತೆ ಹೈಕೋರ್ಟ್ ಸಿಸಿಬಿ ಪೊಲೀಸರಿಗೆ ಆದೇಶಿಸಿದೆ.

ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್‍ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಪ್ರಕಟಿಸಿದೆ.  

ಸಿಸಿಬಿ ಪೊಲೀಸರು ತನಿಖೆ ಮಾಡುವ ಕೆಲಸವನ್ನು ಮಾಡಬೇಕೇ ವಿನಹ ತಾವೇ ಪೊಲೀಸ್ ಠಾಣೆ ಎನ್ನುವಂತೆ ನಡೆದುಕೊಳ್ಳಬಾರದು ಎಂದು ಸೂಚಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.

ಖಾಸಗಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಎಂಬುವರು ಹಣಕಾಸು ವ್ಯವಹಾರದಲ್ಲಿ ಮೋಸ್ ಮಾಡಿದ್ದಾರೆಂದು ಆರೋಪಿಸಿ ಮೆ.ರಾಮಲಿಂಗಮ್ ಕನ್ಸ್ಟ್ರಕ್ಷನ್ ಕಂಪೆನಿ ಪ್ರೈವೆಟ್ ಲಿಮಿಟೆಡ್ ಡೈರೆಕ್ಟರ್ ಚಂದ್ರಕಾಂತ್ ಎಂಬವರು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದು ಮತ್ತಿಕೆರೆ ರಸ್ತೆಯಲ್ಲಿರುವ ಪವರ್ ಟಿವಿ ಸುದ್ದಿ ವಾಹಿನಿಯ ಕಚೇರಿಯಲ್ಲಿ ತಪಾಸಣೆ ನಡೆಸಿ, ದಾಖಲೆ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅರ್ಜಿದಾರರ ಪರವಾಗಿ ಮಾಜಿ ಅಡ್ವಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News