ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಶೀಘ್ರವೇ ಕೇಂದ್ರ ತಂಡದ ಆಗಮನ: ಸಚಿವ ಆರ್.ಅಶೋಕ್

Update: 2020-11-09 15:49 GMT

ಬೆಂಗಳೂರು, ನ. 9: ರಾಜ್ಯದಲ್ಲಿ ಸುರಿದ ಅಬ್ಬರದ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಾನಿಗೀಡಾಗಿರುವ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರ ತಂಡ ಶೀಘ್ರದಲ್ಲೆ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯಿಂದ 24,942 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು ಮಾರ್ಗಸೂಚಿ ಅನ್ವಯ ನೆರವು ನೀಡಲು ಮನವಿ ಮಾಡಲಾಗಿದೆ. ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 2,385 ಕೋಟಿ ರೂ.ಅನುದಾನ ನೀಡಲು ಆಗ್ರಹಿಸಲಾಗಿದೆ ಎಂದರು.

ರಾಜ್ಯದಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ 90 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗಿದೆ. ಈವರೆಗೂ ಒಟ್ಟು 4.5 ಕೋಟಿ ರೂ. ಪರಿಹಾರ ನೀಡಲಾಗಿದೆ. 1,935 ಜಾನುವಾರುಗಳು ಸಾವನ್ನಪ್ಪಿವೆ. 21.6 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಸಚಿವ ಅಶೋಕ್ ವಿವರಣೆ ನೀಡಿದರು.

ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮ ವಹಿಸಲಾಗಿದೆ. ಈವರೆಗೆ ಒಟ್ಟು 2,56,491 ಸಂತ್ರಸ್ತ ರೈತರ ಖಾತೆಗೆ 203.78 ಕೋಟಿ ರೂ.ಜಮೆ ಮಾಡಲಾಗಿದೆ. ರಾಯಚೂರು ಜಿಲ್ಲೆಯ ರೈತರಿಗೆ ತಲಾ 10 ಸಾವಿರ ರೂ. ಪಾವತಿ ಮಾಡುವುದು ಬಾಕಿಯಿದ್ದು, ಒಂದೆರಡು ದಿನಗಳಲ್ಲಿ ಪಾವತಿಸಲಾಗುವುದು. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಪ್ರವಾಹ ಪರಿಸ್ಥಿತಿಯಿಂದ 29 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. 48 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಹಾನಿಗೀಡಾದ ಮನೆಗಳಿಗೆ ತಲಾ 5ಲಕ್ಷ ರೂ., ಭಾಗಶಃ ಹಾನಿಗೀಡಾದ ಮನೆಗಳಿಗೆ 3ಲಕ್ಷ ರೂ. ಹಾಗೂ ಬೆಳೆ ಹಾನಿಗೆ 10 ಸಾವಿರ ರೂ.ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News